ಅತಿಸಾರ ಭೇದಿ ತಡೆಗಟ್ಟಿ ಮಕ್ಕಳನ್ನು ರಕ್ಷಿಸಿ : ಜಾವೇದ್ ಅಖ್ತರ್
ಜೂನ್ 3 ರಿಂದ ಜೂನ್ 17 ರ ವರೆಗೆ ರಾಜ್ಯಾದ್ಯಂತ ಆಚರಿಸಲಾಗುತ್ತಿರುವ ತೀವ್ರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ.
ಬೆಂಗಳೂರು : ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣದಲ್ಲಿ ಶೇಕಡಾ 10 ರಷ್ಟು ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿರುವ ಅತಿಸಾರ ಭೇದಿ ರೋಗವನ್ನು ಸುಲಭವಾಗಿ ತಡೆಗಟ್ಟಬಹುದಾಗಿದ್ದು, ಸಕಾಲದಲ್ಲಿ ಸರಳ ಮಾರ್ಗೋಪಾಯಗಳನ್ನು ಅನುಸರಿಸುವುದರಿಂದ ಮಕ್ಕಳನ್ನು ಸಾವಿನಿಂದ ರಕ್ಷಿಸಬಹುದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ತಿಳಿಸಿದರು.
ಜೂನ್ 3 ರಿಂದ ಜೂನ್ 17 ರ ವರೆಗೆ ರಾಜ್ಯಾದ್ಯಂತ ಆಚರಿಸಲಾಗುತ್ತಿರುವ ತೀವ್ರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ದಿನದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಬಾರಿ ಹಾಗೂ ನೀರಾಗಿ ಮಲವಿಸರ್ಜನೆ ಮಾಡುವುದನ್ನು ಅತಿಸಾರ ಭೇದಿ ಎಂದು ಗುರುತಿಸಬಹುದಾಗಿದೆ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮತ್ತು ಮಳೆಗಾಲದಲ್ಲಿ ಅತಿಸಾರ ಭೇದಿ ರೋಗದಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಾಣಬಹುದು. ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಲ್ಲಿ ರೋಗದ ತೀವ್ರತೆ ಅಧಿಕವಾಗಿ ಕಂಡು ಬರುತ್ತದೆ ಎಂದರು.
ವೈದ್ಯರ ಮಾರ್ಗದರ್ಶನದಲ್ಲಿ ಓ ಆರ್ ಎಸ್ ಎಂದೇ ಕರೆಯಲ್ಪಡುವ ಓರಲ್ ರೀ-ಹೈಡ್ರೇಷನ್ ಸಲೂಷನ್ ಮತ್ತು ಜಿಂಕ್ ಮಾತ್ರೆಗಳನ್ನು ಸೇವಿಸುವುದರಿಂದ ಅತಿಸಾರ ಭೇದಿಯ ಪರಿಣಾಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣವನ್ನು ನಿಯಂತ್ರಿಸಬಹುದು.
ಶುದ್ಧ ಕುಡಿಯುವ ನೀರು, ಕೈಗಳ ಶುಚಿತ್ವ, ಶೌಚಾಲಯ ಉಪಯೋಗ, ಪರಿಸರ ನೈರ್ಮಲ್ಯ, ಲಸಿಕೆಗಳನ್ನು ಹಾಕಿಸುವುದು, ಪೌಷ್ಠಿಕ ಆಹಾರ ಹಾಗೂ ಸರಿಯಾಗಿ ಎದೆ ಹಾಲು ಉಣಿಸುವುದರಿಂದ ಮಕ್ಕಳಲ್ಲಿ ಅತಿಸಾರ ಭೇದಿಯನ್ನು ತಡೆಗಟ್ಟಬಹುದು ಎಂದು ಜಾವೇದ್ ಅಖ್ತರ್ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತರು, ಶಿಕ್ಷಣ ಇಲಾಖೆಯ ಶಿಕ್ಷಕರು, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ತೀವ್ರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕದ ಅವಧಿಯಲ್ಲಿ ಜನ ಸಾಮಾನ್ಯರಲ್ಲಿ ಅತಿಸಾರ ಭೇದಿ ನಿಯಂತ್ರಣ ಕುರಿತಂತೆ ತೀವ್ರತರ ತಿಳುವಳಿಕೆ ಮೂಡಿಸಲಿದ್ದಾರೆ. ಓ ಆರ್ ಎಸ್ ಪೊಟ್ಟಣಗಳನ್ನು ಹಾಗೂ ಜಿಂಕ್ ಮಾತ್ರೆಗಳನ್ನು ಐದು ವರ್ಷ ವಯೋಮಾನದೊಳಗಿನ ಮಕ್ಕಳು ಇರುವ ಮನೆ ಮನೆಗೆ ತೆರಳಿ ವಿತರಿಸಲಿದ್ದಾರೆ. ಅಲ್ಲದೆ, ಆ ಕುಟುಂಬದ ಎಲ್ಲಾ ಸದಸ್ಯರಲ್ಲಿ ಮನೆಯ ಶುಚಿತ್ವದ ಕುರಿತಂತೆ ಅರಿವು ಮೂಡಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ ಎಂಬ ಧ್ಯೇಯ ವಾಕ್ಯ ಹೊತ್ತ ಈ ಪಾಕ್ಷಿಕದಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಅತಿಸಾರ ಭೇದಿ ನಿಯಂತ್ರಣ ಚಿಕಿತ್ಸೆಯ ಸೌಲಭ್ಯವಿದೆ ಎಂದು ಅವರು ವಿವರಿಸಿದರು.
ಈ ಮುನ್ನ, ಆಯ್ದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಐದು ವರ್ಷ ವಯೋಮಾನದೊಳಗಿನ ಮಕ್ಕಳ ಪಾಲಕ-ಪೋಷಕರಿಗೆ ಜಾವೇದ್ ಅಖ್ತರ್ ಅವರು ಓ ಆರ್ ಎಸ್ ಪೊಟ್ಟಣಗಳನ್ನು ಹಾಗೂ ಜಿಂಕ್ ಮಾತ್ರೆಗಳನ್ನು ವಿದ್ಯುಕ್ತವಾಗಿ ವಿತರಿಸಿ ಮಕ್ಕಳಿಗೆ ಕೊಡುವಂತೆ ಸಲಹೆ ನೀಡಿ ತೀವ್ರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕ ಡಿ ಎಸ್ ರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ ಟಿ ಎಸ್ ಪ್ರಭಾಕರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಪರ ನಿರ್ದೇಶಕ ಡಾ ಓಂ ಪ್ರಕಾಶ್ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್ ಭೃಂಗೀಶ್, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಸ್ ಪ್ರಕಾಶ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ ಸಯ್ಯದ್ ಸಿರಾಜುದ್ದೀನ್ ಮದನಿ, ಮಕ್ಕಳ ಆರೋಗ್ಯ ವಿಭಾಗದ ಉಪ ನಿರ್ದೇಶಕ ಡಾ ಪ್ರಭುದೇವ್ ಜಿ ಗೌಡ ಅವರೂ ಪಾಲ್ಗೊಂಡಿದ್ದರು.