ಚೆನ್ನೈ: ನಗರದ ಸವಿತಾ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಿದ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಏಳು ವರ್ಷದ ಬಾಲಕನ ಬಾಯಿಂದ ವೈದ್ಯರು 526 ಹಲ್ಲುಗಳನ್ನು ಕಿತ್ತಿದ್ದಾರೆ. 


COMMERCIAL BREAK
SCROLL TO CONTINUE READING

"ಕೆಳಗಿನ ಬಲ ದವಡೆಯಲ್ಲಿ ಉಂಟಾದ ಊತದಿಂದಾಗಿ ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್ ಎಂಬ ಅಪರೂಪದ ಪ್ರಕರಣದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ಮೂರು ವರ್ಷದವನಿದ್ದಾಗಲೇ ದವಡೆಯಲ್ಲಿ ಊತ ಕಾಣಿಸಿಕೊಂಡಿರುವುದನ್ನು ಬಾಲಕರು ಗಮನಿಸಿದ್ದಾರೆ. ಆದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಊತ ಹೆಚ್ಚಾದಂತೆ ಬಾಲಕನಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಎಕ್ಸ್-ರೇ ಮತ್ತು ಸಿಟಿ-ಸ್ಕ್ಯಾನ್ ನಲ್ಲಿ ಬಾಲಕನ ಬಾಯಲ್ಲಿ ಬಹಳಷ್ಟು ಹಲ್ಲುಗಳಿರುವುದು ಪತ್ತೆಯಾದ ಕಾರಣ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ" ಎಂದು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಪಿ.ಸೆಂಥಿಲ್ನಾಥನ್ ಬುಧವಾರ ಹೇಳಿದ್ದಾರೆ.


"ಸಾಮಾನ್ಯ ಅರಿವಳಿಕೆ ನೀಡಿದ ಬಳಿಕ ನಾವು ದವಡೆಯನ್ನು ತೆಗೆದು, ಅದರೊಳಗೆ ಒಂದು ಚೀಲವನ್ನು ಗಮನಿಸಿದೆವು. ಸುಮಾರು 200ಗ್ರಾಂ ತೂಕದ ಆ ಚೀಲವನ್ನು ಎಚ್ಚರಿಕೆಯಿಂದ ಹೊರತೆಗೆಯಲಾಗಿ, ಅದರಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಒಟ್ಟು 526 ಹಲ್ಲುಗಳಿರುವುದು ಕಂಡುಬಂದಿದೆ" ಎಂದು ಸೆಂಥಿಲ್ನಾಥನ್ ತಿಳಿಸಿದರು.


ಕೆಲವು ಬಹಳ ಸಣ್ಣ ಕಣಗಳಾಗಿದ್ದರೂ, ಅವುಗಳಲ್ಲಿ ಹಲ್ಲುಗಳ ಗುಣಗಳಿವೆ. ಆ ಚೀಲದಿಂದ ಎಲ್ಲಾ ಹಲ್ಲುಗಳನ್ನು ಹೊರತೆಗೆಯಲು 5 ಗಂಟೆಗಳೇ ಬೇಕಾದವು. ಶಸ್ತ್ರ ಚಿಕಿತ್ಸೆ ಬಳಿಕ ಹುಡುಗ ಆರಾಮವಾಗಿದ್ದಾನೆ. ಈ ರೀತಿಯ ಪ್ರಕರಣ ವಿಶ್ವದಲ್ಲೇ ಮೊದಲನೆಯದು ಎಂದು ವೈದ್ಯರು ತಿಳಿಸಿದ್ದಾರೆ.