ನವದೆಹಲಿ: ಕಳೆದ ವಾರ ದೇಶದಲ್ಲಿ ಹಂದಿ ಜ್ವರದಿಂದ 75 ಮಂದಿ ಸಾವನ್ನಪ್ಪಿದ್ದು, ಈ ವರ್ಷ ಒಟ್ಟು 605 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ಮಾಹಿತಿ ಲಭಿಸಿದೆ. ಭಾನುವಾರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 19,380 ಜನರು ಈ ವೈರಸ್ ಗೆ ತುತ್ತಾಗಿರುವುದು ಖಚಿತಗೊಂಡಿದೆ.


COMMERCIAL BREAK
SCROLL TO CONTINUE READING

ರಾಜಸ್ಥಾನದಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು:
ರಾಜಸ್ಥಾನದಲ್ಲಿ 4,551 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈ ವೈರಸ್ನಿಂದ 162 ಜನರು ಮೃತಪಟ್ಟಿದ್ದಾರೆ. ಗುಜರಾತ್ನಲ್ಲಿ ಹಂದಿ ಜ್ವರದಿಂದ 118 ಜನರು ಮೃತಪಟ್ಟಿದ್ದಾರೆ. ಗುಜರಾತ್ ನಲ್ಲಿ, 3,969 ಜನರಿಗೆ ಈ ಸೋಂಕು ತಗುಲಿರುವ ಬಗ್ಗೆ ದಾಖಲಾಗಿವೆ. ದೆಹಲಿಯಲ್ಲಿ ಕಳೆದ ಮೂರು ವಾರಗಳಲ್ಲಿ 870 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ರಾಜಧಾನಿಯಲ್ಲಿ ಈ ವರ್ಷ 2,835 ಜನರು ಈ ರೋಗದ ಪರಿಣಾಮ ಎದುರಿಸಿದ್ದಾರೆ.


ದೆಹಲಿಯಲ್ಲಿ 6 ದಿನದಲ್ಲಿ 7 ಸಾವು:
ಸೋಮವಾರ ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವೀಸಸ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ದೆಹಲಿಯಲ್ಲಿ ಹಂದಿ ಜ್ವರದಿಂದಾಗಿ ಆರು ದಿನದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.  ಇದರಲ್ಲಿ ಒಬ್ಬರು ದೆಹಲಿಯವರೇ ಆಗಿದ್ದು, ಉಳಿದವರು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಮಧ್ಯಪ್ರದೇಶದಲ್ಲಿ, ಹಂದಿ ಜ್ವರದಿಂದಾಗಿ 71 ಜನರು ಮೃತಪಟ್ಟಿದ್ದಾರೆ ಮತ್ತು 357 ಜನರು ಈ ಸೋಂಕಿಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಈ ರೋಗದಿಂದಾಗಿ 52 ಜನರು ಮೃತಪಟ್ಟಿದ್ದಾರೆ ಮತ್ತು 675 ಜನರು ಸೋಂಕಿಗೆ ಒಳಗಾಗಿದ್ದಾರೆ.


ಹಿಮಾಚಲ ಪ್ರದೇಶದಲ್ಲಿ 34 ಮಂದಿ ಹಂದಿಜ್ವರದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ ಮತ್ತು 298 ಪ್ರಕರಣಗಳು ದಾಖಲಾಗಿವೆ. ಪಂಜಾಬ್ನಲ್ಲಿ ಈ ರೋಗದಲ್ಲಿ 31 ಜನರು ಮೃತಪಟ್ಟಿದ್ದಾರೆ ಮತ್ತು 517 ಮಂದಿ ಸೋಂಕಿಗೆ ಒಳಗಾದರು. ಉತ್ತರ ಪ್ರದೇಶದಲ್ಲಿ 18 ಜನರು ಸಾವನ್ನಪ್ಪಿದ್ದು, 1,431 ಜನರು ಸೋಂಕಿಗೆ ಒಳಗಾಗಿದ್ದರು ಎಂದು ವರದಿ ತಿಳಿಸಿದೆ.