ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಹಾಗಿದ್ದರೆ ಈ ಪಾನೀಯಗಳನ್ನು ಸೇವಿಸಿ
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಪಾನೀಯಗಳನ್ನು ತಯಾರಿಸಿ ಸೇವಿಸಿ.
ದೇಹದ ತೂಕ ಕಡಿಮೆ ಮಾಡಿಕೊಂಡು ಬಳುಕುವ ಬಳ್ಳಿಯಂತೆ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸುವವರಿದ್ದಾರೆ. ಕೆಲವರು ವ್ಯಾಯಾಮ ಮಾಡುವ ಮೂಲಕ ದೇಹದ ತೂಕ ಇಳಿಸಲು ಪ್ರಯತ್ನಿಸಿದರೆ, ಮತ್ತೆ ಕೆಲವರು ಡಯಟ್ ಅನ್ನೋ ಹೆಸರಲ್ಲಿ ಊಟ ಬಿಟ್ಟು ತೆಳ್ಳಗಾಗುವುದಿರಲಿ, ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ.
ಮತ್ತೆ ಕೆಲವರು ಜಿಮ್‍ಗಳಿಗೆ ಹೋದರೆ, ಇನ್ನೂ ಕೆಲವರು ಬ್ಯೂಟಿಪಾರ್ಲರ್‍ಗೆ ಹೋಗಿ, ಸೌಂದರ್ಯತಜ್ಞರನ್ನು, ವೈದ್ಯರನ್ನು ಸಂಪರ್ಕಿಸಿ ಅನೇಕ ಸಲಹೆಗಳನ್ನು ಪಡೆದು ಸಾವಿರಾರು ರೂಪಾಯಿ ಸುರಿಯುತ್ತಾರೆ. ಇಷ್ಟೆಲ್ಲಾ ಸಾಹಸ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹತಾಶರಾದವರಿಗೆ ಇಲ್ಲಿದೆ ಕೆಲವು ಟಿಪ್ಸ್.
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಪಾನೀಯಗಳನ್ನು ತಯಾರಿಸಿ ಸೇವಿಸಿ. ಒಂದು ಹೊತ್ತಿನ ಉಟಕ್ಕೆ ಬದಲಾಗಿ ಇದನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯೊಂದಿಗೆ ದೇಹದ ತೂಕವೂ ಕ್ರಮೇಣ ಕಡಿಮೆಯಾಗುತ್ತದೆ.
1. ಕ್ಯಾರೆಟ್ ಜ್ಯೂಸ್ : ಕ್ಯಾರೆಟ್ 3, ಮಧ್ಯಮ ಗಾತ್ರದ ಸೌತೆಕಾಯಿ 1, ಅರ್ಧ ನಿಂಬೆ ಹಣ್ಣಿನ ರಸ ಮತ್ತು ಒಂದು ಸೇಬಿನ ಹನ್ನಿ. ಇವೆಲ್ಲವನ್ನೂ ಚೆನ್ನಾಗಿ ತೊಳೆದು ರುಬ್ಬಿ, ಜ್ಯೂಸ್ ಮಾಡಿಕೊಂಡು ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಬೆಳಗಿನ ತಿಂಡಿಗೆ ಬದಲಾಗಿ ಇದನ್ನು ಕುಡಿಯಬಹುದು.
2. ತೂಕ ಕಡಿಮೆ ಮಾಡಿಕೊಳ್ಳಲು ವಿಶೇಷ ಚಹಾ : ನೀರು 2 ಕಪ್, ಜೇನುತುಪ್ಪ ಅರ್ಧ ಚಮಚ, ನೈನ್ ಹಣ್ಣಿನ ರಸ ಅರ್ಧ ಚಮಚ, ಹಸಿ ಶುಂಠಿ ಜೆಜ್ಜಿದ್ದು ಒಂದು ಚಮಚ ತೆಗೆದುಕೊಳ್ಳಿ. ಮೊದಲು ನೀರನ್ನು ಕಾಯಿಸಿ ಅದಕ್ಕೆ ಹಸಿ ಶುಂಠಿ ಹಾಕಿ ಕುಡಿಸಿ. ನಂತರ ಅದನ್ನು ಕೆಳಗಿಳಿಸಿ, ಅದಕ್ಕೆ ನಿಂಬೆ ರಸ, ಜೇನು ತುಪ್ಪ ಹಾಕಿ ಮಿಕ್ಸ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಸೇವಿಸಿ.
3. ವೆನಿಲ್ಲಾ, ಬಾದಾಮಿ ಮಿಶ್ರಣ(Green Vanilla Almond Smoothie): ಎಳನೀರು ಒಂದು ಲೋಟ, ಪಾಲಾಕ್ ಸೊಪ್ಪು 2 ಎಲೆ, ಒಂದು ಬಾಳೆಹಣ್ಣು(ಫ್ರಿಡ್ಜ್'ನಲ್ಲಿಟ್ಟಿದ್ದು), 2 ಚಮಚ ಬಾದಾಮಿ ಪೇಸ್ಟ್, 2 ಟೇಬಲ್ ಚಮಚ ವೆನಿಲಾ ಎಕ್ಸ್'ಟ್ರಾಕ್ಟ್, 4 ಟೇಬಲ್ ಚಮಚ ಪ್ರೋಟಿನ್ ಪೌಡರ್, ಒಂದು ಬಟ್ಟಲು ಐಸ್. ಈ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಿದರೆ ತೂಕ ಕಡಿಮೆ ಆಗುತ್ತದೆ.
4. ಕಿತ್ತಳೆ-ಸ್ಟ್ರಾಬೆರ್ರಿ ಜ್ಯೂಸ್ : ಒಂದು ಸಿಪ್ಪೆ ತೆಗೆದ ಕಿತ್ತಳೆ ಹಣ್ಣು, 6-8 ಸ್ಟ್ರಾಬೆರಿ, 8-10 ಪಾಲಾಕ್ ಎಲೆ, ಒಂದು ಬಟ್ಟಲು ಬಾದಾಮಿ ಹಾಲು. ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿ ತಯಾರಿಸಿದ ಪಾನೀಯ ಸೇವನೆ ದೇಹಕ್ಕೆ ಒಳ್ಳೆಯದು.