ಸುಂದರವಾದ, ನೀಳವಾದ ಕೇಶರಾಶಿ ಪಡೆಯಬೇಕೆಂಬುದು ಎಲ್ಲ ಹೆಂಗೆಳೆಯರ ಆಸೆ. ಆದರೆ ನಮ್ಮ ಜೀವನಶೈಲಿ, ಆಹಾರ ಕ್ರಮಗಳು ಇಂತಹ ಆಸೆಗಳಿಗೆ ತಡೆಯನ್ನು ಉಂಟುಮಾಡುತ್ತವೆ. ಅತಿಯಾದ ಶಾಂಪೂ ಬಳಕೆಯೂ ಕೂದಲು ತನ್ನ ನೈಜತೆಯನ್ನು, ಹೊಳಪನ್ನು ಕಳೆದುಕೊಳ್ಳಲು ಕಾರಣವಾಗುತ್ತವೆ. 


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲದೆ, ಕೂದಲು ಬಲಹೀನವಾಗುವುದರ ಜೊತೆಗೆ ಉದುರುವ ಸಮಸ್ಯೆ, ಹೊಟ್ಟಿನ ಸಮಸ್ಯೆ ಕೂಡ ಶುರುವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳಿಂದಲೇ ಕೂದಲನ್ನು ನಯವಾಗಿಸಿ. ಆರೋಗ್ಯಪೂರ್ಣವಾಗಿರಿಸಿಕೊಳ್ಳಿ. 


ನೈಸರ್ಗಿಕ ಪರಿಹಾರೋಪಾಯಗಳು


  • ಅಂಟುವಾಳ ಅಥವಾ ಸೀಗೆಕಾಯಿ ಬಳಸಿ ಸ್ನಾನ ಮಾಡಿ. ಕೂದಲ ಆರೋಗ್ಯಕ್ಕೂ ಒಳ್ಳೆಯದು. 

  • ದಾಸವಾಳದ ಸೊಪ್ಪನ್ನು ರುಬ್ಬಿ, ಅದರ ಪೇಸ್ಟನ್ನು ತಲೆಗೆ ಹಚ್ಚಿಕೊಳ್ಳಿ. ಅರ್ಧ ಘಂಟೆ ಬಿಟ್ಟು ಸ್ನಾನ ಮಾಡಿ. ಕೂದಲು ನಯವಾಗಿ ಹೊಳೆಯುತ್ತದೆ. ಮದರಂಗಿ ಕೂಡ ನಿಮ್ಮ ಕೂದಲ ಹೊಳಪು ಹಾಗೂ ಬಣ್ಣವನ್ನು ಆಕರ್ಷಕ ಗೊಳಿಸಬಲ್ಲದು. 

  • ಬಿಸಿ ನೀರಿನಲ್ಲಿ ಮೊಟ್ಟೆಯ ಒಳಭಾಗವನ್ನು ಚೆನ್ನಾಗಿ ಕಲೆಸಿ ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿ. ಒಂದು ಗಂಟೆ ನಂತರ ತೊಳೆದುಕೊಂಡರೆ ಕೂದಲು ಹೊಳಪಾಗುತ್ತದೆ.

  • ಪೌಷ್ಟಿಕಯುಕ್ತ, ವಿಟಮಿನ್, ಕ್ಯಾಲ್ಸಿಯಂ ಆಹಾರಗಳಾದ ಹಸಿ ತರಕಾರಿ, ಹಣ್ಣುಗಳ ಸೇವನೆ ಹೆಚ್ಚಿಸಿ. 

  • ತಲೆ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಸಾಕು.

  • ಸಾಧ್ಯವಾದಷ್ಟು ಬಾರಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿ. ವಾರಕ್ಕೊಮ್ಮೆಯಾದರೂ ರಾತ್ರಿ ಎಣ್ಣೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿ.

  • ಕೊಬ್ಬರಿ ಎಣ್ಣೆಯಲ್ಲಿ ನೆಲ್ಲಿಕಾಯಿ ಪುಡಿ, ಮೆಂತ್ಯ ಪುಡಿ, ದಾಸವಾಳ ಹೂ, ಕರಿಬೇವು ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಕಿ, ಬಿಸಿ ಮಾಡಿ ಸೋಸಿ ಆಗಾಗ್ಗೆ ಕೂದಲಿಗೆ ಹಚ್ಚಿ.

  • ಸಾಧ್ಯವಾದಷ್ಟೂ ಶ್ಯಾಂಪೂವಿನ ಬಳಕೆ ಕಡಿಮೆ ಮಾಡಿ. ಮಾಡಲೇಬೇಕಿದ್ದರೆ ಬಾಟಲ್‌ಗಿಂತ ಶ್ಯಾಸೆಗಳನ್ನು ಬಳಸಿ.

  • ಹೊರಗೆ ಹೋದಾಗೆಲ್ಲ ತಲೆಗೆ ಸ್ಕಾರ್ಫ್ ಬಳಸಿ ಧೂಳಿನಿಂದ ಕೂದಲ ರಕ್ಷಣೆ ಮಾಡಿ.

  • ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. 

  • ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.

  • ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.

  • ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಿ. ಕೂದಲಿನ ಹೊಳಪು ಹೆಚ್ಚುತ್ತದೆ. 

  • ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.