ಕರ್ನಾಟಕದಲ್ಲೇ ತಂಬಾಕು ಸೇವನೆ ಅತೀ ಹೆಚ್ಚು
ಪರಿಸರದ ಶತ್ರು ತಂಬಾಕು !
ಬೆಂಗಳೂರು: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲೆಡೆ ಜಾಹಿರಾತು ನೀಡಲಾಗುತ್ತದೆ. ಆದರೆ ಯಾರೂ ಕೂಡ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ 27.4 ಕೋಟಿ ಜನರು ತಂಬಾಕನ್ನು ವಿವಿಧ ರೂಪದಲ್ಲಿ ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. ದುರಂತ ಎಂದರೆ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುವ ರಾಜ್ಯ ಕರ್ನಾಟಕವಾಗಿದೆ.
ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ನ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತ ಒಂದು ದಿನದ ಮಾಧ್ಯಮ ಕಾರ್ಯಾಗಾರವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಡಾ ಚಂದ್ರಕಿರಣ್, ಭಾರತದಲ್ಲಿ 27.4 ಕೋಟಿ ಜನರು ತಂಬಾಕನ್ನು ವಿವಿಧ ರೂಪದಲ್ಲಿ ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. ದುರಂತ ಎಂದರೆ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುವ ರಾಜ್ಯ ಕರ್ನಾಟಕವಾಗಿದೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ತಂಬಾಕಿನಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ 35,000 ಮಂದಿ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಒಂದು ತಂಬಾಕು ಎಲೆಯಲ್ಲಿ ನಾಲ್ಕು ಸಾವಿರ ರಾಸಾಯನಿಕಗಳಿರುತ್ತವೆ. ಅದರಲ್ಲಿ ನಾಲ್ಕು ನೂರು ಕಾಸ್ಮೋಜೆನಿಕ್ ರಾಸಾಯಕನಿಕಗಳು ಎಂಬ ಆತಂಕಕಾರಿ ಅಂಕಿಅಂಶಗಳನ್ನು ಹೊರಹಾಕಿದರು.
ಪರಿಸರದ ಶತ್ರು ತಂಬಾಕು !
ಇದೇ ಸಂದರ್ಭದಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತ ವಿಶೇಷ ಉಪನ್ಯಾನ ನೀಡಿದ ಜಿಲ್ಲಾ ಆರೋಗ್ಯ ಸಲಹೆಗಾರ ಡಾ ಎಲ್ ಎಸ್ ಚಂದ್ರಕಿರಣ್ ಅವರು ಮಾತನಾಡಿ ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ, ತಂಬಾಕು ಬೆಳೆ ಬೆಳೆಯಲಾಗುತ್ತದೆ. ತಂಬಾಕು ಬೆಳೆಗಳಲ್ಲಿ ಎಪ್ಪತ್ತು ಪ್ರಬೇಧಗಳಿದ್ದು, ಈ ಪೈಕಿ ವರ್ಜಿನಿಯಾ ಟೊಬ್ಯಾಕೋ ಎಂಬ ತಳಿ ಅತ್ಯಂತ ಅಪಾಯಕಾರಿಯಾಗಿದೆ. ಒಂದೆಡೆ ತಂಬಾಕು ಬೆಳೆ ತಾನು ಬೆಳೆದ ಪ್ರದೇಶದ ಫಲವತ್ತತೆಯನ್ನೇ ನಾಶಪಡಿಸಿ ಆ ಪ್ರದೇಶವನ್ನು ಮರಳುಗಾಡನ್ನಾಗಿಸುತ್ತದೆ. ಮತ್ತೊಂದೆಡೆ ಒಂದು ಕೆ ಜಿ ತಂಬಾಕು ಎಲೆ ಸಂಸ್ಕರಿಸಲು ಐದರಿಂದ ಎಂಟು ಕೆ ಜಿ ಉರುವಲು ಸೌದೆ ಬೇಕಾಗುತ್ತದೆ. ಒಟ್ಟಾರೆ ವಾಣಿಜ್ಯ ಬೆಳೆ ಎಂದೇ ಪರಿಗಣಿಸಲ್ಪಡುವ ತಂಬಾಕು ತನ್ನ ಈ ಗುಣ-ಲಕ್ಷಣಗಳಿಂದ ಪರಿಸರದ ಶತ್ರು ಎನಿಸಿದೆ ಎಂದರು.
ಜೀವಿತಾವಧಿಯ ಹನ್ನೊಂದು ನಿಮಿಷ ಕಡಿತಗೊಳಿಸುವ ಒಂದು ಸಿಗರೇಟ್ !
ಮಾನವನ ಏಕಾಗ್ರತೆಯನ್ನೂ ಕೊಲ್ಲುವ ತಂಬಾಕು ದಿನಕಳೆದಂತೆ ಮಾನವನನ್ನೇ ಬಲಿತೆಗೆದುಕೊಳ್ಳುತ್ತಿದೆ. ಕೇವಲ ಒಂದು ಸಿಗರೇಟ್ ಸೇವನೆಯಿಂದ ನಾವು ನಮ್ಮ ಜೀವಿತಾವಧಿಯ ಹನ್ನೊಂದು ನಿಮಿಷಗಳನ್ನು ಕಡಿತಗೊಳಿಸಿಕೊಳ್ಳುತ್ತಿದ್ದೇವೆ. ಮಾದಕ ವಸ್ತು ಎನಿಸಿರುವ ಕೊಕೇನ್ ಸೇವನೆ 14 ಸೆಕೆಂಡುಗಳಲ್ಲಿ ಮಾನವನ ಮೆದುಳು ಪ್ರವೇಶಿಸಿದರೆ, ನಿಕೋಟಿನ್ ಅಂಶ ಒಳಗೊಂಡ ಬೀಡಿ ಮತ್ತು ಸಿಗರೇಟ್ ಸೇವಿಸುವ, ಹೊಗೆಸೊಪ್ಪು ಮತ್ತು ನಶ್ಯೆ ಬಳಸುವ ವ್ಯಕ್ತಿಯ ಮೆದುಳನ್ನು ಕೇವಲ ಏಳು ಸೆಕೆಂಡ್‍ಗಳಲ್ಲೇ ಪ್ರವೇಶಿಸುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದರು.
ನಿಕ್ರಿಯರಿಗೇ ಹೆಚ್ಚು ಅಪಾಯಕಾರಿ ?
ಧೂಮಪಾನ ಮಾಡುವವರು ತಮ್ಮ ಶ್ವಾಸಕೋಶದಲ್ಲಿ ಹೊಗೆಯನ್ನು ಎರಡೂವರೆ ನಿಮಿಷ ಇಟ್ಟುಕೊಂಡರೆ, ಅವರ ಸುತ್ತ-ಮುತ್ತ ಸುಳಿಯುವ ನಿಕ್ರಿಯ ಧೂಮಪಾನಿಗಳು (ಪ್ಯಾಸಿವ್ ಸ್ಮೋಕರ್ಸ್) ಮೂರೂವರೆಯಿಂದ ನಾಲ್ಕು ನಿಮಿಷಗಳ ಕಾಲ ಇಟ್ಟುಕೊಳ್ಳುತ್ತಾರೆ. ತಾವು ಮಾಡದ ತಪ್ಪಿಗೆ ನಿಕ್ರಿಯ ಧೂಮಪಾನಿಗಳು ಕ್ಯಾನ್ಸರ್‍ನಂತಹ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಬಾಕಿನ ಮೂಲೋತ್ಪಾಟನೆಯಾಗಬೇಕಿದೆ. ಅದಕ್ಕಾಗಿ ತಂಬಾಕು ಬೆಳೆಯುವ ಪ್ರದೇಶದಲ್ಲಿ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಿಂದ ರೈತರ ಹಿತದ ಜೊತೆಗೆ ಜನಸಾಮಾನ್ಯರ ಆರೋಗ್ಯ ರಕ್ಷಣೆಯೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.