ಹೊಟ್ಟೆ ಹಸಿದಾಗ ಕೋಪ ಯಾಕೆ ಬರುತ್ತೆ ಗೊತ್ತಾ?
ಹಸಿವಿನೊಂದಿಗೆ ಸಂಬಂಧಿಸಿದ ಭಾವನಾತ್ಮಕ ಸ್ಥಿತಿಯನ್ನು ಮತ್ತು ಹಸಿದವರು ಹೇಗೆ ಕೋಪಗೊಳ್ಳುತ್ತಾರೆ ಎಂಬುದನ್ನು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಿದೆ.
ವಾಷಿಂಗ್ಟನ್: "ನಂಗೆ ಹೊಟ್ಟೆ ಹಸಿದ್ರೆ ಸಿಕ್ಕಾಪಟ್ಟೆ ಕೋಪ ಬರುತ್ತೆ" ಅಂತ ಹೇಳೋದನ್ನು ನಾವು ಕೇಳಿದ್ದೇವೆ. ಆದರೆ, ಇದೀಗ ವಿಜ್ಞಾನಿಗಳೂ ಇದನ್ನು ಒಪ್ಪಿಕೊಂಡಿದ್ದು, ಇದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದು, ಜೀವವಿಜ್ಞಾನದ ಪರಸ್ಪರ ಕ್ರಿಯೆ, ವ್ಯಕ್ತಿತ್ವ ಮತ್ತು ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದಾಗಿ ಕೋಪ ಬರುತ್ತದೆ ಎಂದಿದ್ದಾರೆ.
ಅಮೇರಿಕಾದ ಉತ್ತರ ಕೆರೊಲ್ಲಾನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾರ್ಥಿ ಜೆನ್ನಿಫರ್ ಮ್ಯಾಕೊರ್ಮಾಕ್ ಈ ಬಗ್ಗೆ ತಿಳಿಸಿದ್ದು, "ಹಸಿವು ಎನ್ನುವುದು ನಮ್ಮ ಭಾವನೆಗಳು ಮತ್ತು ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. 'ಎಮೋಷನ್' ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಮುಖ್ಯ ಲೇಖಕ ಮ್ಯಾಕ್ರೋಕ್ ಅವರು, "ಹಸಿವಿನೊಂದಿಗೆ ಸಂಬಂಧಿಸಿದ ಭಾವನಾತ್ಮಕ ಸ್ಥಿತಿಯನ್ನು ಮತ್ತು ಹಸಿದವರು ಹೇಗೆ ಕೋಪಗೊಳ್ಳುತ್ತಾರೆ ಎಂಬುದನ್ನು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಿದೆ" ಎಂದಿದ್ದಾರೆ.
ಈ ಸಂಬಂಧ 400ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಿದ್ದು, ಹಸಿವಿನಿಂದ ಮಾತ್ರ ಕೋಪ ಬರುವುದಿಲ್ಲ, ಜನರ ಭಾವನಾತ್ಮಕ ಮಟ್ಟ ಮತ್ತು ವ್ಯಕ್ತಿತ್ವದಿಂದ ನಿರ್ಧರಿಸಲ್ಪಡುತ್ತದೆ. ಅದಕ್ಕೆ ಹಸಿವಾಗಲೇ ಬೇಕು ಎಂದೇನಿಲ್ಲ ಎಂಬ ಅಂಶ ತಿಳಿದುಬಂದಿದೆ.
ನಿಮ್ಮ ಕೋಪವನ್ನು ನಿಯಂತ್ರಿಸಲು 6 ಸಲಹೆಗಳು
ಕೋಪ ಎಂಬುದು ಒಂದು ಸಾಮಾನ್ಯ ಭಾವನೆ. ಹಾಗಾಗಿ ಸಾಕಷ್ಟು ಸಂದರ್ಭಗಳಲ್ಲಿ ನಾವು ಕೋಪಗೊಳ್ಳುತ್ತೇವೆ. ಆದರೆ, ಇದು ನಿಯಂತ್ರಣವಿಲ್ಲದಿದ್ದಾಗ, ಅದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಗೆಡುವುದಲ್ಲದೆ, ಸಾಮಾಜಿಕ ಸಂಬಂಧಗಳನ್ನೂ ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲದೇ, ಕೋಪವು ಹೃದಯಾಘಾತ, ಸ್ಟ್ರೋಕ್, ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿಯೇ ಕೋಪದಿಂದ ಬಳಲುತ್ತಿರುವ ಯಾವುದೇ ವ್ಯಕ್ತಿ ಸಾಮಾಜಿಕವಾಗಿ ಬೆರೆಯುವುದಿಲ್ಲ. ಕೋಪವನ್ನು ನಿಯಂತ್ರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.
1. ಯಾವುದೇ ಮಾತನಾಡುವ ಮುಂಚೆ, ಆಲೋಚಿಸಿ. ಏಕೆಂದರೆ ನಿಮ್ಮ ಮಾತಿನಿಂದ ಇತರರಿಗೆ ಕೋಪ ಬರುವಂತಾಗಬಹುದು.
2. ನಿಮ್ಮ ಕೋಪದ ಸೂಚನೆಗಳನ್ನು ಅರಿಯಿರಿ. ನೀವು ಕೋಪಗೊಂಡಾಗ, ನಿಮ್ಮ ಹೃದಯ ಬಡಿತ ವೇಗವಾಗಿ, ಉಸಿರಾಟ ಹೆಚ್ಚಾಗುತ್ತದೆ. ಇಂತಹ ಸಂದರ್ಭವನ್ನು ನಿಯಂತ್ರಿಸಲು ಪ್ರಯತ್ನಿಸಿ.
3. ನೀವು ತುಂಬಾ ಕೋಪಗೊಂಡಿದ್ದರೆ, 10 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಗಳನ್ನು ಎಣಿಸಿ. ಇದು ನಿಮ್ಮ ಕೋಪ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
4. ನಿಮ್ಮ ಕೋಪವು ಧನಾತ್ಮಕ ಕಾರಣಗಳಿಗಾಗಿದ್ದರೆ, ಇತರರನ್ನು ನೋಯಿಸದೆ, ನಿಮ್ಮ ನಿರಾಶಾ ಮನೋಭಾವವನ್ನು ವ್ಯಕ್ತಪಡಿಸಲು ಪ್ರಯತ್ನಿಸಿ.
5. ಅತಿ ಹೆಚ್ಚು ಕೋಪ ಬ್ಬಂದಾಗ ನಿಧಾನವಾಗಿ ಉಸಿರಾಡಿ, ವಿರಮಿಸಿ. ಇದರಿಂದ ನಿಮ್ಮ ಕೋಪವನ್ನು ನಿಯಂತ್ರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.
6. ಪ್ರತಿನಿತ್ಯ ಚೆನ್ನಾಗಿ ನಿದ್ದೆ ಮಾಡಿ.ನಿದ್ರೆ ಸರಿಯಾಗಿ ಮಾಡದಿದ್ದರೆ, ಅದೂ ಕೂಡ ಎಲ್ಲಾ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಸರಿಯಾಗಿ ನಿದ್ರೆ ಮಾಡಿದರೆ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.