ನವದೆಹಲಿ: 74 ನೇ ವಯಸ್ಸಿನಲ್ಲಿ ಮಹಿಳೆ ತಾಯಿಯಾಗಬಹುದೇ… ಈ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದ್ದರೆ, ಉತ್ತರ ಹೌದು, ಏಕೆಂದರೆ ಇಂದು ಗುಂಡೂರು ನಗರ ಆಂಧ್ರಪ್ರದೇಶದಲ್ಲಿ ವೈದ್ಯರು 74 ವರ್ಷದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ವೈದ್ಯರು ಈ ಮಹಿಳೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

74 ವರ್ಷದ ಎರ್ರಮಟ್ಟಿ ಮಂಗಮ್ಮ ಅವರು ಎರ್ರಾಮಟಿ ರಾಜ ರಾವ್ (ಈಗ 80) ಅವರನ್ನು ಮಾರ್ಚ್ 22, 1962 ರಂದು ವಿವಾಹವಾದರು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದವರಾದ ರಾಜ ರಾವ್ ಮತ್ತು ಮಂಗಮ್ಮ ಅವರಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದೆ ನೊಂದಿದ್ದ ದಂಪತಿ ಮಕ್ಕಳು ಪಡೆಯುವ ಸಲುವಾಗಿ ಹಲವು ದೇವರ ಮೊರೆಹೋದರು. ಜೊತೆಗೆ ವೈದ್ಯರಿಂದ ಚಿಕಿತ್ಸೆಯನ್ನೂ ಪಡೆದಿದ್ದರು.


ವರ್ಷಗಳುರುಳಿದರೂ ಅವರಿಗೆ ಮಕ್ಕಳಾಗಲಿಲ್ಲ. ಆದರೆ ಕಳೆದ ವರ್ಷ ನವೆಂಬರ್ 2018 ರಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಲುಪಿದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡರು. ಈ ದಂಪತಿಗೆ ಚಿಕಿತ್ಸೆ ನೀಡಿದ ಡಾ.ಶಾನಕ್ಯಾಲ ಉಮಾಶಂಕರ್ ಅವರು ಜೀ ಮೀಡಿಯಾಕ್ಕೆ 'ಈ ಮಹಿಳೆಗೆ ರಕ್ತದೊತ್ತಡ(ಬಿಪಿ), ಶುಗರ್(ಸಕ್ಕರೆ ಕಾಯಿಲೆ) ಅಂತಹ ಯಾವುದೇ ತೊಂದರೆ ಇರಲಿಲ್ಲ. ಅಷ್ಟೇ ಅಲ್ಲದೆ ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶಶಾಸ್ತ್ರಜ್ಞರು ಸೇರಿದಂತೆ ಇತರ ವಿಶೇಷ ವೈದ್ಯರೊಂದಿಗೆ ಚರ್ಚಿಸಿ ಇವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿದ ನಂತರ, ನಾವು ಈ ಬಗ್ಗೆ ಮುಂದುವರಿಯಲು ನಿರ್ಧರಿಸಿದ್ದೇವೆ. ಬಹಳ ಹಿಂದೆಯೇ ಆಕೆಯ ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್ (ವಿಟ್ರೊ ಫಲೀಕರಣದಲ್ಲಿ) ಮೂಲಕ, ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಮಾಡುವಲ್ಲಿ ಸಫಲರಾದೆವು' ಎಂದರು.


ಈ ವಯಸ್ಸಿನಲ್ಲಿ ಮಗು ಪಡೆಯುವ ಬಗ್ಗೆ ಜೀ ಮೀಡಿಯಾಕ್ಕೆ  ಪ್ರತಿಕ್ರಿಯಿಸಿರುವ ರಾಜ ರಾವ್, "ಮಕ್ಕಳಿಲ್ಲದ ಕಾರಣ ನಮ್ಮ ಹಳ್ಳಿಯಲ್ಲಿ ನಾವು ಸಾಕಷ್ಟು ಸಾಮಾಜಿಕ ಕಳಂಕಗಳನ್ನು ಎದುರಿಸಿದ್ದೇವೆ. ನಮ್ಮ ಮದುವೆಯ ನಂತರ ನಾವು ಎಲ್ಲಿ ಹೋದರು ಅನುಭವಿಸುತ್ತಿದ್ದ ನಿಂದನೆ ಸಹಿಸಲಸಾಧ್ಯ. ಇದಕ್ಕಾಗಿ ನಾವು ಬೇಡದ ದೇವರಿಲ್ಲ. ತೆಗೆದುಕೊಳ್ಳದ ಚಿಕಿತ್ಸೆ ಇಲ್ಲ. ಇದೀಗ ದೇವರು ನಮಗೆ ದಯೆ ತೋರಿದ್ದಾರೆ. ಇದು ದೇವರ ಆಶೀರ್ವಾದ ಎಂದು ನಾವು ಭಾವಿಸುತ್ತೇವೆ" ಎಂದಿದ್ದಾರೆ.


ಬಹುಶಃ, ಭಾರತದಲ್ಲಿ 74 ನೇ ವಯಸ್ಸಿನಲ್ಲಿ ಮಹಿಳೆ ತಾಯಿಯಾಗುತ್ತಿರುವುದು ಇದೇ ಮೊದಲು.