ನವದೆಹಲಿ: 2019-20 ರಿಂದ 2021-22ರ ಅವಧಿಯಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ 1.95 ಕೋಟಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2019-20 ಅನ್ನು ಮಂಡಿಸುತ್ತಾ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಯೋಜನೆಯಡಿ 2015-16ರಲ್ಲಿ 314 ದಿನಗಳಿದ್ದ ಮನೆಗಳನ್ನು ಪೂರ್ಣಗೊಳಿಸುವ ಸಮಯವನ್ನು 2017-18ರಲ್ಲಿ 114 ಕ್ಕೆ ಇಳಿಸಲಾಗಿದೆ. ಇದು ಮೋದಿ ಸರ್ಕಾರದ ಸಾಧನೆಯಾಗಿದೆ ಎಂದು ಹೇಳಿದರು.


ಮುಂದುವರೆದು "ನಮ್ಮ ಸರ್ಕಾರ ಯಾವುದೇ ಕಾರ್ಯವನ್ನು ಕೈಗೊಂಡರೂ ಅದರಲ್ಲಿ ಗ್ರಾಮೀಣ ಜನತೆ, ಬಡವರು ಮತ್ತು ರೈತರನ್ನು ಹೆಚ್ಚು ಕೆಂದ್ರೀಕರಿಸಲಾಗುತ್ತದೆ. 2022 ರ ಹೊತ್ತಿಗೆ, ವಿದ್ಯುತ್ ಮತ್ತು ಅನಿಲ ಸಂಪರ್ಕ ಪಡೆಯಲು ಇಚ್ಚಿಸದ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ವಿದ್ಯುತ್ ಮತ್ತು ಶುದ್ಧ ಅಡುಗೆ ಸೌಲಭ್ಯ ಲಭ್ಯವಾಗಲಿದೆ"ಎಂದು ಸೀತಾರಾಮನ್ ಹೇಳಿದರು.


"ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣದ ಎರಡನೇ ಹಂತದಲ್ಲಿ 2019-20 ರಿಂದ 2021-22ರ ಅವಧಿಯಲ್ಲಿ 1.95 ಕೋಟಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುವುದು. ಅವರಿಗೆ ಎಲ್ಪಿಜಿ, ವಿದ್ಯುತ್ ಮತ್ತು ಶೌಚಾಲಯಗಳಂತಹ ಸೌಲಭ್ಯಗಳನ್ನೂ ಒದಗಿಸಲಾಗುವುದು" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.