ಕೊಲ್ಕತ್ತಾ: ಮಾಲ್ದಾದಲ್ಲಿ 1.92 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ವಿಶೇಷ ಕಾರ್ಯಪಡೆಯ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಂಧಿತ ಆರೋಪಿಯನ್ನು ಮಾಲ್ಡಾದ ಬೈಷ್ಣಬ್ ನಗರದ ಕುಂಭೀರ ಗ್ರಾಮದ ನಿವಾಸಿ ಯೂಸುಫ್ ಸೇಖ್ (21) ಎಂದು ಗುರುತಿಸಲಾಗಿದೆ. ಮೈದಾನದ ಬಾಬು ಘಾಟ್ ಬಸ್ ನಿಲ್ದಾಣದ ಬಳಿ 2 ಸಾವಿರ ರೂ. ಮುಖಬೆಲೆಯ 1.92 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 


"ಆಗಸ್ಟ್ 17ರಂದು ರಾತ್ರಿ ಸುಮಾರು 10.05 ಗಂಟೆಗೆ, ಕೋಲ್ಕತ್ತಾದ ಎಸ್‌ಟಿಎಫ್‌ನ ಎಫ್‌ಐಸಿಎನ್ ವಿರೋಧಿ ತಂಡವು ಮೈದಾನ ಪಿಎಸ್ ಪ್ರದೇಶದ ಬಾಬು ಘಾಟ್ ಬಸ್ ಸ್ಟ್ಯಾಂಡ್ ಬಳಿಯ ಸ್ಟ್ರಾಂಡ್ ರಸ್ತೆಯಿಂದ ಮಾಲ್ಡಾ ಮೂಲದ ನಕಲಿ ನೋಟು ಜಾಲವನ್ನು ಪತ್ತೆ ಹಚ್ಚಿದ್ದು, ದೊಡ್ಡ ಪ್ರಮಾಣದ ನಕಲಿ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿದೆ. ಆತನ ಬಳಿ 1,92,000 ರೂ.(2000 ರೂ.ಗಳ 96 ನೋಟುಗಳು)ಗಳಿದ್ದವು”ಎಂದು ಎಸ್‌ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.


ಸೆಖ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 489 ಬಿ (ನಿಜವಾದ, ಖೋಟಾ ಅಥವಾ ನಕಲಿ ಕರೆನ್ಸಿ ನೋಟುಗಳು ಅಥವಾ ಬ್ಯಾಂಕ್ ನೋಟುಗಳಾಗಿ ಬಳಸುವುದು), 489 ಸಿ (ಖೋಟಾ ಅಥವಾ ನಕಲಿ ಕರೆನ್ಸಿ ನೋಟುಗಳು ಅಥವಾ ಬ್ಯಾಂಕ್ ನೋಟುಗಳನ್ನು ಹೊಂದಿರುವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.