ನವದೆಹಲಿಯಲ್ಲಿ ಆಘಾತಕಾರಿ ಘಟನೆ: ಒಂದೇ ಕುಟುಂಬದ 11 ಮಂದಿ ನಿಗೂಢ ಸಾವು
ಒಂದೇ ಕುಟುಂಬದ 11 ಮಂದಿಯ ಮೃತದೇಹ ಮನೆಯೊಂದರಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
ನವದೆಹಲಿ: ಒಂದೇ ಕುಟುಂಬದ 11 ಮಂದಿಯ ಮೃತದೇಹ ಮನೆಯೊಂದರಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ.
10 ಮೃತದೇಹಗಳು ಕಣ್ಣಿಗೆ ಬಟ್ಟೆಕಟ್ಟಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೊಂದು ಮೃತದೇಹ ನೆಲದ ಮೇಲೆ ಪತ್ತೆಯಾಗಿದೆ. ಮೃತ ಕುಟುಂಬದವರು ಕಿರಾಣಿ ಮತ್ತು ಪೀಠೋಪಕರಣ ಅಂಗಡಿ ಇಟ್ಟುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತ 11 ಮಂದಿಯಲ್ಲಿ ವಯಸ್ಸಾದ ಮಹಿಳೆ, ಆಕೆಯ ಮಗಳು, ಇಬ್ಬರು ಪುತ್ರರು, ಸೊಸೆಯರು ಮತ್ತು ಪುತ್ರರ ಮಕ್ಕಳು ಮತ್ತು ಮಗಳ ಪುತ್ರಿ ಎನ್ನಲಾಗಿದೆ. ಮೃತರನ್ನು ನಾರಾಯನೆ (75), ಪ್ರತಿಭಾ(60), ಪ್ರಿಯಾಂಕಾ(30), ಭೂಪಿಂದರ್(46), ಸವಿತಾ(42), ನೀತು(24), ಮೀನು(18), ಧ್ರುವ(12), ಲಲಿತ್ ಸಿಂಗ್(42) ಟೀನಾ(38) ಮತ್ತು ಶಿವಂ(12) ಎಂದು ಗುರುತಿಸಲಾಗಿದೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. "ಮೃತರಲ್ಲಿ ಮೃತರಲ್ಲಿ ಏಳು ಮಂದಿ ಮಹಿಳೆಯರು ಮತ್ತು ನಾಲ್ವರು ಪುರುಷರಾಗಿದ್ದು, ಅವರಲ್ಲಿ ಮೂವರು ಯುವಕರಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ದೊರೆತಿಲ್ಲ. ಸಾವಿಗೆ ಕಾರಣ ಏನು ಎಂದು ತಿಳಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ದೆಹಲಿ ಪೋಲಿಸ್ ಜಂಟಿ ಆಯುಕ್ತ ರಾಜೇಶ್ ಖೌರಾನಾ ತಿಳಿಸಿದ್ದಾರೆ.
"ಮೃತರಲ್ಲಿ ಕೆಲವರು ಕಬ್ಬಿಣದ ಸರಳಿಗೆ ನೇಣುಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮತ್ತೆ ಕೆಲವರ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ನೆಲದ ಮೇಲೆ ಕಂಡುಬಂದಿದ್ದಾರೆ. ಆರ್ಮಭಿಕ ತನಿಖೆಯಿಂದ ಆತ್ಮಹತ್ಯೆ ಎಂದು ಕಂಡುಬಂದರೂ, ಕೊಲೆ ಆಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಹಾಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ನಾವು ಸಿಸಿಟಿವಿ ಫೂಟೇಜ್ಗಳನ್ನೂ ಸಹ ಪರಿಶೀಲಿಸುತ್ತೇವೆ" ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.
"ಲಲಿತ್ ಮತ್ತು ಭುಪಿಂದರ್ ಇಬ್ಬರೂ ಸ್ನೇಹಪರರು... ಅವರ ವ್ಯಾಪಾರವೂ ಚೆನ್ನಾಗಿಯೇ ನಡೆಯುತ್ತಿತ್ತು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನಾನು ಕಳೆದ ರಾತ್ರಿಯಷ್ಟೇ ಭುಪಿಂದರ್ ಜೊತೆ ಮಾತನಾಡಿದ್ದೇನೆ, ಅವರು ಬಹಳ ಸಂತೋಷದಿಂದಿದ್ದರು. ಅಲ್ಲದೆ, ಅವರ ಮುಖದಲ್ಲಿ ಯಾವುದೇ ಒತ್ತಡದ ಸೂಚನೆ ಇರಲಿಲ್ಲ" ಎಂದು ನೆರೆಮನೆಯವರು ಹೇಳಿದ್ದಾರೆ.