ಕಾಂಗ್ರೆಸ್‌ಗೆ ಬಿಗ್ ಶಾಕ್: ತೆಲಂಗಾಣದಲ್ಲಿ ಪಕ್ಷದ 12 ಶಾಕಸರು ಟಿಆರ್ಎಸ್ಗೆ
ತಮ್ಮನ್ನು ಟಿಆರ್‌ಎಸ್ ಜತೆ ವಿಲೀನ ಮಾಡಬೇಕು ಎಂದು ಕಾಂಗ್ರೆಸ್ ಬಂಡಾಯ ಶಾಸಕರು ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ.
ಹೈದರಾಬಾದ್: ಮೇಲಿಂದ ಮೇಲೆ ಆಘಾತ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ತೀವ್ರ ಹಿನ್ನೆಡೆಯಾಗಿದೆ. ತೆಲಂಗಾಣದ 12 ಮಂದಿ ಕಾಂಗ್ರೆಸ್ ಶಾಸಕರು ಪಕ್ಷವನ್ನು ತ್ಯಜಿಸಿ ಟಿಆರ್‌ಎಸ್ ಪಕ್ಷ ಸೇರ್ಪಡೆಯಾಗಲು ತೀರ್ಮಾನಿಸಿದ್ದು ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ. ತಮ್ಮನ್ನು ಟಿಆರ್‌ಎಸ್ ಜತೆ ವಿಲೀನ ಮಾಡಬೇಕು ಎಂದು ಕಾಂಗ್ರೆಸ್ ಬಂಡಾಯ ಶಾಸಕರು ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ.
ಒಟ್ಟು 119 ಸದಸ್ಯಬಲವಿರುವ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 19 ಮಂದಿ ಶಾಸಕರಿದ್ದರು. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಇತ್ತೀಚಿಗೆ ಲೋಕಸಭಾ ಚುನಾವಣೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಶಾಸಕರ ಸಂಖ್ಯೆ 18ಕ್ಕೆ ಇಳಿದಿದೆ. ಇದರ ಬೆನ್ನಲ್ಲೇ ಪಕ್ಷದ 12 ಶಾಸಕರು ಟಿಆರ್‌ಎಸ್ ಪಕ್ಷವನ್ನು ಸೇರಲು ಮುಂದಾಗಿದ್ದಾರೆ.
12 ಕಾಂಗ್ರೆಸ್ ಶಾಸಕರು ತೆಲಂಗಾಣ ವಿಧಾನಸಭಾ ಸ್ಪೀಕರ್ ಪೋಖ್ರಾಮ್ ಶ್ರೀನಿವಾಸ್ ರೆಡ್ಡಿಯವರನ್ನು ಭೇಟಿಯಾಗಿ ತಮ್ಮನ್ನು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯೊಂದಿಗೆ ವಿಲೀನ ಗೊಳಿಸುವಂತೆ ವಿನಂತಿಸಿದ್ದಾರೆ.
ಶಾಸಕರ ವಿಲೀನ ವಿಷಯದಲ್ಲಿ ನಾವು ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ತೆಲಂಗಾಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಎನ್. ಉತ್ತಮ್ ಕುಮಾರ್ ರೆಡ್ಡಿ ಹೇಳಿದರು.