ಗೋರಖ್ಪುರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಕುಟುಂಬದ ಕಣ್ಣೆದುರೇ 12 ವರ್ಷದ ಬಾಲಕಿ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಅಹಿರುಲಿ ಬಜಾರ್ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಗೆ ಒಳಪಡುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆರು ಪುರುಷರಲ್ಲಿ ನಾಲ್ವರನ್ನು ಬಂದಿಸಲಾಗಿದ್ದು, ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

"ಆರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಪಿಓಸಿಎಸ್ಒ ಕಾಯಿದೆ ಮತ್ತು ಎಸ್ಸಿ ಎಸ್​ಸಿ/ಎಸ್​ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧೀಕ್ಷಕ ಆರ್.ಎನ್. ಮಿಶ್ರಾ ಹೇಳಿದ್ದಾರೆ.


"ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ," ಎಸ್​ಪಿ ಹೇಳಿದರು.


ವರದಿಗಳ ಪ್ರಕಾರ, ಆರೋಪಿಗಳು ಶುಕ್ರವಾರ ಬೆಳಿಗ್ಗೆ ಒಳಚರಂಡಿ ವ್ಯವಸ್ಥೆ ನಿರ್ಮಾಣದ ಕುರಿತು ಬಾಲಕಿಯ ಕುಟುಂಬದೊಂದಿಗೆ ಜಗಳವಾಡಿದ್ದರು ಎನ್ನಲಾಗಿದೆ. ಸಂಜೆ, ಅವರೆಲ್ಲರೂ ಬಾಲಕಿಯ ಕುಟುಂಬದ ಕಣ್ಣೆದುರೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆಯೇ ಹಲ್ಲೆ ಮಾಡಲಾಗಿದೆ.


ಶನಿವಾರ ಬೆಳಿಗ್ಗೆ ಸಂತ್ರಸ್ತೆಯ ತಾಯಿ ಈ ಘಟನೆ ಕುರಿತು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಆರೋಪಿಗಳ ಬೆನ್ನಟ್ಟಿದ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ಇಬ್ಬರು ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.