ಬಾಲ್ಯ ವಿವಾಹದಿಂದ ರಕ್ಷಣೆ ಕೋರಿ ರಾಜಸ್ತಾನದ ಸಿಎಂಗೆ ಬಾಲಕಿ ಮೊರೆ
ರಾಜಸ್ತಾನದಲ್ಲಿ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನನ್ನು ಬಾಲ್ಯವಿವಾಹದಿಂದ ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮೊರೆ ಹೋಗಿದ್ದಾಳೆ.
ನವದೆಹಲಿ: ರಾಜಸ್ತಾನದಲ್ಲಿ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನನ್ನು ಬಾಲ್ಯವಿವಾಹದಿಂದ ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮೊರೆ ಹೋಗಿದ್ದಾಳೆ.
ರಾಜಸ್ತಾನದ ಟೋಂಕ್ ಜಿಲ್ಲೆಯವರಾಗಿದ್ದ ಬಾಲಕಿ ಸೋಮವಾರದಂದು ಅಶೋಕ್ ಗೆಹ್ಲೋಟ್ ಅವರ ಜನ್ ಸುನ್‌ವಾಯ್ (ಸಾರ್ವಜನಿಕ ಕುಂದುಕೊರತೆ ವಿಚಾರಣಾ ಸಭೆ) ಯಲ್ಲಿ ತನ್ನನ್ನು ಬಾಲ್ಯವಿವಾಹದಿಂದ ರಕ್ಷಿಸಬೇಕೆಂದು ಮನವಿ ಮಾಡಿದ್ದಾಳೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ತನ್ನ ಚಿಕ್ಕಪ್ಪನೊಂದಿಗೆ ಮುಖ್ಯಮಂತ್ರಿಯ ನಿವಾಸಕ್ಕೆ ಬಂದ ಬಾಲಕಿ ಮದುವೆಯಾಗಲು ತನ್ನ ತಂದೆ ಒತ್ತಾಯಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಗೆಹ್ಲೋಟ್‌ಗೆ ಮನವಿ ಮಾಡಿದ್ದಾಳೆ. ಬಾಲಕಿ ತಾಯಿ ತೀರಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಲು ಅವರು ಒತ್ತಾಯಿಸುತ್ತಿದ್ದಾರೆ ಎಂದು ಆಕೆ ಸಿಎಂ ಎದುರು ತನ್ನ ಅಳಲು ತೋಡಿಕೊಂಡಿದ್ದಾಳೆ. ಈಗ ಬಾಲಕಿಯ ರಕ್ಷಣೆಗಾಗಿ ಮುಖ್ಯಮಂತ್ರಿ ಗೆಹ್ಲೋಟ್ ಅವರು ಜಿಲ್ಲಾಧಿಕಾರಿ ಮತ್ತು ಟೋಂಕ್ ಪೊಲೀಸ್ ಮುಖ್ಯಸ್ಥರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆಕೆ ಭವಿಷ್ಯದ ಕನಸುಗಳ ಬಗ್ಗೆ ವಿಚಾರಿಸಿದ ಸಿಎಂ ಸರ್ಕರದದಿಂದ ಸಹಾಯ ಹಸ್ತದ ಭರವಸೆ ನೀಡಿದರು ಎನ್ನಲಾಗಿದೆ.ಈಗ ಆ ಬಾಲಕಿಗೆ ಶಾರದಾ ಬಾಲಿಕಾ ರೆಸಿಡೆನ್ಶಿಯಲ್ ಸ್ಕೂಲ್ ಯೋಜನೆಯಡಿ ಉಚಿತ ಶಿಕ್ಷಣ ಸೌಲಭ್ಯವನ್ನು ಪಡೆಯಬಹುದು ಎಂದು ಅಧಿಕಾರಿಗಳು ಬಾಲಕಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.