ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಸಿಎಂ ಗೆಹ್ಲೋಟ್ ಸಹಾಯ ಕೋರಿದ ಬಾಲಕಿ!
ಮನೆಯಲ್ಲಿ ತನ್ನ ತಾಯಿ ತೀರಿಕೊಂಡಿದ್ದಾರೆ. ಹೀಗಾಗಿ ತಂದೆ ನನಗೆ ಈ ವಯಸ್ಸಿನಲ್ಲಿಯೇ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಆ 15 ವರ್ಷದ ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಸಿಎಂ ನಿವಾಸಕ್ಕೆ ತೆರಳಿ ಮನವಿ ಮಾಡಿದ್ದಾಳೆ ಎನ್ನಲಾಗಿದೆ.
ಜೈಪುರ: ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರದ ಕಠಿಣ ನೀತಿ ಮತ್ತು ಕ್ರಮಗಳ ನಡುವೆಯೇ, 15 ವರ್ಷದ ಬಾಲಕಿಯೊಬ್ಬಳು ಬಾಲ್ಯ ವಿವಾಹದಿಂದ ತನ್ನನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹಾಯಕ್ಕೆ ಮೊರೆ ಹೋದ ಘಟನೆ ಸೋಮವಾರ ನಡೆದಿದೆ.
ಸಿಎಂ ಗೆಹ್ಲೋಟ್‌ನ ಅವರು ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ವಿಚಾರಣಾ ಸಭೆಯಲ್ಲಿ ಬಾಲ್ಯ ವಿವಾಹಕ್ಕೆ ಬಲಿಯಾಗಲಿರುವ ಬಗ್ಗೆ ರಾಜ್ಯದ ಟೋಂಕ್ ಜಿಲ್ಲೆಗೆ ಸೇರಿದ ಬಾಲಕಿ ವಿವರಿಸಿದ್ದು, ಸಿಎಂ ಅವರ ಸಹಾಯವನ್ನು ಕೋರಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಹೇಳಿಕೆ ತಿಳಿಸಿದೆ.
ಮನೆಯಲ್ಲಿ ತನ್ನ ತಾಯಿ ತೀರಿಕೊಂಡಿದ್ದಾರೆ. ಹೀಗಾಗಿ ತಂದೆ ನನಗೆ ಈ ವಯಸ್ಸಿನಲ್ಲಿಯೇ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಆ 15 ವರ್ಷದ ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಸಿಎಂ ನಿವಾಸಕ್ಕೆ ತೆರಳಿ ಮನವಿ ಮಾಡಿದ್ದಾಳೆ ಎನ್ನಲಾಗಿದೆ.
ಬಾಲಕಿಯ ರಕ್ಷಣೆಗಾಗಿ ಮುಖ್ಯಮಂತ್ರಿ ಗೆಹ್ಲೋಟ್ ಅವರು ಜಿಲ್ಲಾಧಿಕಾರಿ ಮತ್ತು ಟೋಂಕ್ ಪೊಲೀಸ್ ಅಧಿಕಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದು, ಬಾಲಕಿಯ ಭವಿಷ್ಯದ ಮಹತ್ವಾಕಾಂಕ್ಷೆಗಳ ಬಗ್ಗೆ ವಿಚಾರಿಸಿ, ಆಕೆಯ ಕನಸುಗಳನ್ನು ಈಡೇರಿಸುವಲ್ಲಿ ಸರ್ಕಾರದ ಸಹಾಯ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಶಾರದಾ ಬಾಲಿಕಾ ರೆಸಿಡೆನ್ಶಿಯಲ್ ಸ್ಕೂಲ್ ಯೋಜನೆಯಡಿ ಉಚಿತ ಶಿಕ್ಷಣ ಸೌಲಭ್ಯವನ್ನು ಪಡೆಯಲು ಅಧಿಕಾರಿಗಳು ಆಕೆಗೆ ತಿಳಿಸಿದ್ದಾರೆ.