ನಿಜಾಮಾಬಾದ್(ತೆಲಂಗಾಣ): ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯುತ್ತಿದೆ. ನಿಜಾಮಾಬಾದ್ ನಲ್ಲಿ ಹೆಚ್ಚಿನ ಅಭ್ಯರ್ಥಿಗಳಿದ್ದು, ಪ್ರತಿಯೊಬ್ಬರ ಕಣ್ಣು ಈ ಕ್ಷೇತ್ರದತ್ತ ನೆಟ್ಟಿದೆ. ಇಲ್ಲಿನ ಪ್ರತಿ ಮತಗಟ್ಟೆಯಲ್ಲೂ 12 ಇವಿಎಂ ಗಳನ್ನು ಬಳಸಲಾಗುತ್ತಿದೆ.


COMMERCIAL BREAK
SCROLL TO CONTINUE READING

"ಇದೇ ಮೊದಲ ಬಾರಿಗೆ ಒಂದು ಕ್ಷೇತ್ರದಲ್ಲಿ ಇಷ್ಟು ಅಭ್ಯರ್ಥಿಗಳು ಕಣದಲ್ಲಿದ್ದು, ದೊಡ್ಡ ಪ್ರಮಾಣದಲ್ಲಿ ಇವಿಎಂಗಳನ್ನು ಬಳಸಲಾಗುತ್ತಿದೆ" ಎಂದು ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ಹೇಳಿದ್ದಾರೆ.


ಚುನಾವಣಾ ಕಣದಲ್ಲಿ 178 ರೈತರು ಸೇರಿದಂತೆ 188 ಅಭ್ಯರ್ಥಿಗಳಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್) ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.


ಇದೇ ಕ್ಷೇತ್ರದಿಂದ ರಾಜ್ಯಸಭಾ ಸದಸ್ಯ ಡಿ. ಶ್ರೀನಿವಾಸ್ ಅವರ ಮಗ ಡಿ. ಅರವಿಂದ್ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿ ಗೌಡ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ.


ಅರಿಶಿನ ಉತ್ಪಾದನೆಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವಲ್ಲಿ ಟಿಎಸ್ಆರ್ ಸರ್ಕಾರ ವಿಫಲವಾಗಿದೆ ಎಂದು ಇಲ್ಲಿನ ರೈತರು ಆರೋಪಿಸಿದ್ದಾರೆ. 


ವಾಸ್ತವವಾಗಿ, ಇತರ ಎಲ್ಲಾ ಕ್ಷೇತ್ರಗಳಲ್ಲೂ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ನಿಜಾಮಾಬಾದ್ ಕ್ಷೇತ್ರದಲ್ಲಿ ಒಂದು ಗಂಟೆ ತಡವಾಗಿ ಮತದಾನ ಆರಂಭವಾಯಿತು. ಹೆಚ್ಚಿನ ಅಭ್ಯರ್ಥಿಗಳಿರುವ ಕಾರಣ ಅತಿ ಹೆಚ್ಚು ಇವಿಎಂ ಗಳ ನಿಯೋಜನೆಗೆ ಅಧಿಕ ಸಮಯ ತೆಗೆದುಕೊಂಡ ಕಾರಣ ಮತದಾನ ತಡವಾಗಿ ಆರಂಭವಾಯಿತು ಎನ್ನಲಾಗಿದೆ.


ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣದಲ್ಲಿರುವುದರಿಂದ 12 ಬ್ಯಾಲೆಟ್ ಘಟಕಗಳನ್ನು ಸರಣಿಯಲ್ಲಿ ಸೇರಿಸಲಾಗಿದೆ. ಚುನಾವಣಾ ಆಯೋಗವು M3 ಮಾದರಿಯ EVM ಅನ್ನು ಬಳಸುತ್ತಿದೆ ಎಂದು ತಿಳಿಸಿದೆ.


ಸಾಮಾನ್ಯವಾಗಿ ಚುನಾವಣಾ ಆಯೋಗವು ಮತದಾನ ನಡೆಯುವ ಪ್ರದೇಶದಲ್ಲಿ 15 ರಿಂದ 16 ಎಂಜಿನಿಯರ್ಗಳನ್ನು ತಾಂತ್ರಿಕ ದೋಷ ನಿವಾರಣೆಗೆ ನಿಯೋಜಿಸುತ್ತದೆ. ಆದರೆ ನಿಜಾಮಾಬಾದ್ ಕ್ಷೇತ್ರದಲ್ಲಿ ಸುಮಾರು 600 ಎಂಜಿನಿಯರ್ಗಳನ್ನು ನಿಯೋಜಿಸಲಾಗಿದೆ.


ನಿಜಾಮಾಬಾದ್ ಕ್ಷೇತ್ರಕ್ಕೆ 26,000 ಮತದಾನ ಘಟಕಗಳು, 2,200 ನಿಯಂತ್ರಣ ಘಟಕಗಳು ಮತ್ತು ಸುಮಾರು 26,000 ವಿವಿಪಟ್ಗಳನ್ನು ಬಳಸಲಾಗುತ್ತಿದೆ.