ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ 18 ಸಾವು
ವಿಜಯವಾಡ: ಆಂಧ್ರಪ್ರದೇಶದ ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ 18 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಭಾನುವಾರ ಸಂಭವಿಸಿದೆ. 30 ಎನ್ ಡಿ ಆರ್ ಎಫ್ ಹಾಗೂ 45 ರಾಜ್ಯ ವಿಪತ್ತು ನಿರ್ವಹಣಾ ದಳ ಮತ್ತು ಅಗ್ನಿಶಾಮಕ ದಳದ ಮೂರು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಈಗಾಗಲೇ 18 ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಘಟನೆಯಲ್ಲಿ ಮುಳುಗಡೆಗೊಂಡ ಇನ್ನೂ ಕೆಲವರ ಹುಡುಕಾಟ ಕಾರ್ಯಾಚರಣೆ ಮುಂದುವರೆದಿದೆ ಎಂದು ಕೃಷ್ಣಾ ಜೆಲ್ಲೆಯ ಜಿಲ್ಲಾಧಿಕಾರಿ ಬಿ. ಲಕ್ಷ್ಮೀ ಕಾಂತಮ್ ಇಂದು ಮುಂಜಾನೆ ತಿಳಿಸಿದ್ದಾರೆ. ಅಲ್ಲದೆ ಈ ಘಟನೆಯ ಕುರಿತಾಗಿ ತನಿಖೆಯನ್ನು ನಡೆಸಲು ಸರ್ಕಾರದಿಂದ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಘಟನೆಗೆ ಕಾರಣವನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.
ಖಾಸಗಿ ಕಂಪನಿಯಿಂದ ನಿರ್ವಹಿಸಲ್ಪದುತ್ತಿದ್ದ ಈ ಹಡಗಿನಲ್ಲಿ ಒಟ್ಟು 38 ಜನರು ಪ್ರಯಾಣಿಸುತ್ತಿದ್ದರು. ಅವರಲ್ಲಿ 18 ಮೃತದೇಹ ಪತ್ತೆಯಾಗಿದೆ, 15 ಜನರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಮತ್ತು ಇನ್ನುಳಿದವರಿಗಾಗಿ ರಕ್ಷಣಾ ಪಡೆಗಳ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂದಿಸಿದ್ದಾರೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ.
ಈ ದೋಣಿಯಲ್ಲಿ ಬದುಕುಳಿದವರು ತಿಳಿಸಿರುವಂತೆ ದೋಣಿಯು ಅತಿಯಾದ ಪ್ರಯಾಣಿಕರಿಂದ ತುಂಬಿದ್ದ ಕಾರಣ ಈ ದುರಂತ ಜರುಗಿದೆ ಎಂದು ಹೇಳಿದ್ದಾರೆ.
ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಅಲ್ಲದೆ ಗೃಹ ಸಚಿವ ಎನ್. ಚಿನ್ನರಾಜಪ್ಪ, ವಿರೋಧ ಪಕ್ಷದ ನಾಯಕ ವೈ.ಎಸ್. ಜಗನಮೋಹನರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಹರಿಬಾಬು ಮುಂತಾದವರು ಸಹ ಈ ದುರಂತದಲ್ಲಿ ಮಡಿದವರಿಗೆ ಸಂತಾಪ ತಿಳಿಸಿದ್ದಾರೆ.