ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಂಗಳವಾರ ಸಂಭವಿಸಿದ 5.8 ತೀವ್ರತೆಯ ಭೂಕಂಪದಿಂದಾಗಿ 19 ಮಂದಿ ಸಾವನ್ನಪ್ಪಿದ್ದು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, PoKಯ ಮಿರ್ಪುರ್ ಎಂಬ ಪಟ್ಟಣದಲ್ಲಿ ಭೂಕಂಪದಿಂದಾಗಿ ರಸ್ತೆಗಳು ಬಿರುಕುಬಿಟ್ಟಿದ್ದು, ಕಟ್ಟಡಗಳು ಹಾನಿಗೊಳಗಾಗಿವೆ.


COMMERCIAL BREAK
SCROLL TO CONTINUE READING

ಅದೃಷ್ಟವಶಾತ್ ಭೂಕಂಪದಿಂದಾಗಿ ಕೇವಲ ಒಂದು ಪ್ರದೇಶಕ್ಕೆ ಹಾನಿ ಸೀಮಿತವಾಗಿದೆ. ಇಲ್ಲವಾಗಿದ್ದರೆ ಸಾಕಷ್ಟು ನಷ್ಟ ಹಾಗೂ ಪ್ರಾಣಹಾನಿ ಸಂಭವಿಸುತ್ತಿತ್ತು. ಭೂಕಂಪ ಸಂತ್ರಸ್ತರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ವಾಯುಯಾನ ಮತ್ತು ವೈದ್ಯಕೀಯ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ತಿಳಿಸಿದ್ದಾರೆ.


"ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣದ ನೆರವು ನೀಡುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ" ಎಂದು ಪಾಕಿಸ್ತಾನ ಸರ್ಕಾರ ಟ್ವೀಟ್ ನಲ್ಲಿ ತಿಳಿಸಿದೆ.


ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, 5.8 ತೀವ್ರತೆಯ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿದ್ದು, ಅದರ ಕೇಂದ್ರ ಬಿಂದುವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಿರ್ಪುರದ ಆಗ್ನೇಯಕ್ಕೆ 1 ಕಿ.ಮೀ ದೂರದಲ್ಲಿದೆ. ಭೂಕಂಪದಿಂದಾಗಿ ಈ ಪ್ರದೇಶದ ರಸ್ತೆ ಮಾರ್ಗಗಳು ತೀವ್ರವಾಗಿ ಹಾನಿಗೀಡಾಗಿರುವುದರಿಂದ ಪಿಒಕೆ ಮಿರ್ಪುರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.


ಇಸ್ಲಾಮಾಬಾದ್, ರಾವಲ್ಪಿಂಡಿ, ಮುರ್ರಿ,ಝೇಲಮ್, ಚಾರ್ಸಡ್ಡ, ಸ್ವಾತ್, ಖೈಬರ್, ಅಬೋಟಾಬಾದ್, ಬಜೌರ್, ನೌಶೇರಾ, ಮನ್ಸೆಹ್ರಾ, ಬಟಾಗ್ರಾಮ್, ಟೋರ್ಘರ್ ಮತ್ತು ಕೊಹಿಟಾನ್ ನಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಡಾನ್ ವರದಿಗಳ ಪ್ರಕಾರ, ಪಾಕಿಸ್ತಾನದ ವಿವಿಧ ಭಾಗಗಳಲ್ಲಿ 8-10 ಸೆಕೆಂಡುಗಳ ಭೂಮಿ ಕಂಪಿಸಿದ ಅನುಭವವಾಗಿದೆ.