ಮುಂಬೈ: ಇಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಬ್ಬರು ಬಾಲಕರು ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ. 


COMMERCIAL BREAK
SCROLL TO CONTINUE READING

ಮನೆಯವರು ಎಷ್ಟೇ ಬೇಡವೆಂದರೂ ಮಳೆಯಲ್ಲಿ ಆಟವಾಡಲು ಹೋಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. 


ಮೃತ ಬಾಲಕರನ್ನು ರಿಷಬ್(10) ಮತ್ತು ತುಷಾರ್(11) ಎಂದು ಗುರುತಿಸಲಾಗಿದ್ದು, ಮಕ್ಕಳು ಆಡುತ್ತಿದ್ದ ಸ್ಥಳದ ಬಳಿ ಕಬ್ಬಿಣದ ಏಣಿಯನ್ನು ಇರಿಸಲಾಗಿತ್ತು. ಪಕ್ಕದಲ್ಲಿಯೇ ವಿದ್ಯುತ್ ತಂತಿ ಹಾದುಹೋಗಿದ್ದರಿಂದ ಹಾಗೂ ಮಳೆ ಬೀಳುತ್ತಿದ್ದು ಕಾರಣದಿಂದ ವಿದ್ಯುತ್ ಕಬ್ಬಿಣದ ಏಣಿಗೆ ಹರಿದ ಸಂದರ್ಭದಲ್ಲಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಆಟವಾಡುತ್ತಿದ್ದ ಮಕ್ಕಳು ಅರಿವಿಲ್ಲದೆ ಕಬ್ಬಿಣದ ಏಣಿಯನ್ನು ಹತ್ತಲು ಹೋದಾಗ ವಿದ್ಯುತ್ ತಗುಲಿದೆ. ಅವರೊಂದಿಗೆ ಆಟವಾಡುತ್ತಿದ್ದ ಬಾಲಕಿ ಆ ಮಕ್ಕಳಿಗೆ ಸಹಾಯ ಮಾಡಲು ಯತ್ನಿಸಿದಳಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.