ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; 2 ಸಾವು, ಮೂವರಿಗೆ ಗಾಯ
ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ನವದೆಹಲಿ: ಇಲ್ಲಿನ ಸೀಲಾಂಪುರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಸುಮಾರು 10.30ರ ಸಮಯದಲ್ಲಿ ಕಟ್ಟಡ ಕುಸಿದ ಬಗ್ಗೆ ಮಾಹಿತಿ ದೊರೆತಿದ್ದು, ಕೂಡಲೇ ಅಗ್ನಿಶಾಮಕ ದಳದ 6 ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಸೀಲಾಂಪುರದ ಕೆ ಬ್ಲಾಕ್‌ನಲ್ಲಿ ಕಟ್ಟಡ ಕುಸಿದಿದ್ದು, ಸುಮಾರು 10 ಜನರು ಅವಶೇಷಗಳಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ಐಎಎನ್ಎಸ್'ಗೆ ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್, ದೆಹಲಿ ಪೊಲೀಸ್ ತಂಡ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, 5 ಜನರನ್ನು ಕಟ್ಟಡದ ಅವಶೇಷಗಳ ಅಡಿಯಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಸೀಲಾಂಪುರದ ಕೆ-ಬ್ಲಾಕ್ ನಿವಾಸಿಗಳಾದ ಮೋನಿ (21) ಮತ್ತು ಮೊಹಮ್ಮದ್ ಯಾಸೀನ್ (65) ಎಂದು ಗುರುತಿಸಲಾಗಿದ್ದು, ಗುರು ತೇಜ್ ಬಹದ್ದೂರ್, ಅರ್ಮಾನ್ (33) ಮತ್ತು ಸಹಜನ್ ಬೇಗಂ (33) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಠಾಕೂರ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಕಾನೂನು ರೀತಿಯಲ್ಲಿ ಹೆಚ್ಚಿನ ತನಿಖೆ ನಡೆಸಲಾಗುವುದು. ಕಟ್ಟಡ ಕುಸಿತಕ್ಕೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ಠಾಕೂರ್ ತಿಳಿಸಿದ್ದಾರೆ.