ಸೂರ್ಯಪೇಟೆ: ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಅಕುಪಮುಲಾ ಗ್ರಾಮದ ಬಳಿ ಗುರುವಾರ ರಾತ್ರಿ ಕಾರೊಂದು ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸೂರ್ಯಪೇಟೆ ಜಿಲ್ಲೆಯ ಕೊಡಾಡಾ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಟ್ಯಾಂಕರ್ ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.


ಮೃತರನ್ನು ಜೆ.ಲಕ್ಷ್ಮಮ್ಮ (95) ಮತ್ತು ಟಿ.ನಾಗಮ್ಮ (55) ಎಂದು ಗುರುತಿಸಲಾಗಿದೆ. ಇತರ ಪ್ರಯಾಣಿಕರಾದ ಜೆ.ಲೋಕೇಶ್, ಜೆ.ರಂಗರಾವ್, ಚ.ಕೃಷ್ಣ, ಪಿ.ಬಾಬುರಾವ್, ಜೆ.ರಾಮ, ಜೆ.ಮೌನಿಕಾ, ಪಿ.ಸ್ವಾತಿ ಮತ್ತು ಚಾಲಕ ಪ್ರವೀಣ್ ತೀವ್ರವಾಗಿ ಗಾಯಗೊಂಡಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಕೊಡಾಡಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಅವರೆಲ್ಲರನ್ನೂ ವಿಜಯವಾಡಕ್ಕೆ ಸ್ಥಳಾಂತರಿಸಲಾಗಿದೆ. ಮೃತರು ಶ್ರೀಕಾಕುಲಂ ಜಿಲ್ಲೆಯ ಪಟಪಟ್ಟಣಂ ಮೂಲದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.