ಮುಂಬೈ: ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಶಾಲಾ ಅಧಿಕಾರಿಗಳೇ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಹಾಸ್ಟೆಲ್ ಸೂಪರಿಂಟೆಂಡೆಂಟ್ ಚಬನ್ ಪಾಚೇರ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ನರೇಂದ್ರ ವಿರುತ್ಕರ್ ಅವರೇ ವಿದ್ಯಾರ್ಥಿಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದು, ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.  ಅಲ್ಲದೆ, ಹಾಸ್ಟೆಲ್ ವಾರ್ಡನ್ ಕಲ್ಪನಾ ಠಾಕ್ರೆ ಮತ್ತು ಸಹಾಯಕಿ ಲತಾ ಕನಕೆ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.


ಚಂದ್ರಾಪುರ ಜಿಲ್ಲೆಯ ರಜುರಾ ತಹಸೀಲ್ ನಲ್ಲಿರುವ ಈ ವಸತಿ ಶಾಲೆ ಕಾಂಗ್ರೆಸ್ ಶಾಸಕರಿಗೆ ಸೇರಿದ್ದು, ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿದೆ ಎನ್ನಲಾಗಿದೆ. ಸದ್ಯ ಅತ್ಯಾಚಾರಕ್ಕೊಳಗಾದ 9 ಮತ್ತು 10 ವರ್ಷದ ಬಾಲಕಿಯರನ್ನು ಚಂದ್ರಾಪುರ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಒಳಪಡಿಸಲಾಗಿ, ಅತ್ಯಾಚಾರ ನಡೆದಿರುವುದು ಖಚಿತವಾಗಿದೆ.


ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಸತಿ ಶಾಲೆಯ ಸೂಪರಿಂಟೆಂಡೆಂಟ್ ಕಚೇರಿಯಲ್ಲಿ ಹಲವು ಕಾಂಡೋಮ್ ಗಳು, ವಯಾಗ್ರಾ ಮಾತ್ರೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಣಕಾಸು ಸಚಿವ ಹಾಗೂ ಚಂದ್ರಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧೀರ್ ಮುಂಗಂಟಿವಾರ್ ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೆ, ಶಾಲೆಗೇ ನೀಡಲಾಗಿದ್ದ ಸರ್ಕಾರದ ಮಾನ್ಯತೆಯನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.