ಮುಜಾಫರ್ಪುರ: ಬಿಹಾರದ ಮುಜಫರ್ ಪುರ್ ಜಿಲ್ಲೆಯ ಕಂಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಪಕ್ಷದ ಇಬ್ಬರು ಮುಖಂಡರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.


COMMERCIAL BREAK
SCROLL TO CONTINUE READING

ಘಟನೆಯಲ್ಲಿ ಆರ್ಜೆಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಯಾದವ್ ಮತ್ತು ನಾಯಕ ಉಮಾಶಂಕರ್ ಪ್ರಸಾದ್ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


ಮುಜಫರ್ ಪುರ್ ಜಿಲ್ಲೆಯ ಶೆರ್ನಾ ಗ್ರಾಮದ ಬಳಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಯಾದವ್ ಅವರಿಗೆ ಎರಡು ಗುಂಡು, ಪ್ರಸಾದ್ ಅವರಿಗೆ ನಾಲ್ಕು ಗುಂಡುಗಳು ತಗುಲಿವೆ. 


"ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ, ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು. ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ" ಎಂದು ಡಿಎಸ್ಪಿ ಮುಕುಲ್ ರಂಜನ್ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿದ್ದಾರೆ.