ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 200-300 ಭಯೋತ್ಪಾದಕರು ಇನ್ನೂ ಸಕ್ರಿಯರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಭಾನುವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ, ಪಾಕಿಸ್ತಾನ ಸೇನೆಯಿಂದ ಉರಿ, ರಾಜೌರಿ, ಪೂಂಚ್ ಮತ್ತು ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಿತಿ ಮೀರಿ ನಡೆಯುತ್ತಿದೆ. ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮ ಉಲ್ಲಂಘನೆಯ ಪ್ರಯತ್ನಗಳು ಹೆಚ್ಚಿದ್ದು, ಗಡಿಯುದ್ದಕ್ಕೂ ನುಸುಳುವವರನ್ನು ಭಾರತದೆಡೆಗೆ ತಳ್ಳುವುದು ಪಾಕಿಸ್ತಾನದ ಹೇಯ ತಂತ್ರವಾಗಿದೆ ಎಂದು ಡಿಜಿಪಿ ಸಿಂಗ್ ಬಹಿರಂಗಪಡಿಸಿದರು.


ಗಡಿ ಪ್ರದೇಶಗಳನ್ನು ರಕ್ಷಿಸುವ ಭಾರತದ ಒಳನುಸುಳುವಿಕೆ ವಿರೋಧಿ ಗ್ರಿಡ್ ತುಂಬಾ ಪ್ರಬಲವಾಗಿದ್ದು, ಈ ಹಿಂದೆ ಭಯೋತ್ಪಾದಕರು ಒಳನುಸುಳುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿದರು.


ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿರುವ ಡಿಜಿಪಿ ದಿಲ್ಬಾಗ್ ಸಿಂಗ್, ಜಮ್ಮು, ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಲ್ಲಿ ಪ್ರಸ್ತುತ ಅತ್ಯಂತ ಶಾಂತಿಯುತ ಪರಿಸ್ಥಿತಿಯಿದೆ. ಇದು ಕಾಶ್ಮೀರದಲ್ಲೂ ಶಾಂತಿ ನೆಲೆಗೊಳ್ಳುತ್ತಿದೆ ಎಂದರು. 


ಭಾನುವಾರ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಬಳಿಯ ಬಾರಾಮುಲ್ಲಾ ಸೆಕ್ಟರ್‌ನಲ್ಲಿ ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಿದೆ. ವರದಿಗಳ ಪ್ರಕಾರ, 4-5 ಒಳನುಸುಳುವವರ ಗುಂಪು ಎಲ್‌ಒಸಿ ಬಳಿಯ ನೌಗಾಂವ್ ಸೆಕ್ಟರ್‌ನಲ್ಲಿರುವ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದು, ಬಿಎಸ್ಎಫ್ ಪಡೆ ಭಾರಿ ಗುಂಡಿನ ದಾಳಿ ನಡೆಸಿ ಭಯೋತ್ಪಾದಕರನ್ನು ಹಿಮ್ಮೆಟ್ಟುವಂತೆ ಮಾಡಿದೆ.