ನವದೆಹಲಿ: ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಸೇರಿದಂತೆ ಒಟ್ಟು 208 ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಎಡರಂಗದ ಸಂಘಟನೆಗಳು ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ಹಿಂಸಾಚಾರ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ. 'ಶಿಕ್ಷಣ ಸಂಸ್ಥೆಗಳಲ್ಲಿ ಎಡಪಂಥೀಯರ ಅರಾಜಕತೆಯ ವಿರುದ್ಧ ಹೇಳಿಕೆ' ಎಂಬ ಶಿರ್ಷಿಗೆ ಅಡಿಯಲ್ಲಿ ಬರೆಯಲಾದ ಈ ಪತ್ರದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ  ಕಾರ್ಯಕರ್ತರು ನಡೆಸುವ ಚಟುವಟಿಕೆಗಳ ಕಾರಣ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುತ್ತಿದ್ದು, ವಿಶ್ವವಿದ್ಯಾಲಯಗಳಲ್ಲಿನ ವಾತಾವರಣ ಕೂಡ ಹದೆಗೆಡುತ್ತಿದೆ. ಒಟ್ಟು 208 ಶಿಕ್ಷಣ ತಜ್ಞರು ಮಾಡಿರುವ ಆರೋಪದ ಪ್ರಕಾರ, ಅತಿ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ಆಲೋಚನೆಗಳನ್ನು ಎಡಪಂಥೀಯ ವಿಚಾರಧಾರೆಗಳು ಪ್ರಭಾವಿತಗೊಳಿಸುತ್ತಿವೆ ಎಂದಿದ್ದಾರೆ. ಇದರಿಂದ ಹೊಸ ವಿದ್ಯಾರ್ಥಿಗಳ ಗಮನ ವಿದ್ಯಾಭ್ಯಾಸದಿಂದ ದೂರಹೋಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರ ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪತ್ರ ರವಾನಿಸಿದ್ದು, JNU ನಿಂದ ಜಾಮೀಯಾವರೆಗೆ ಹಾಗೂ AMU ನಿಂದ ಜಾದವ್ ಪುರ್ ವರೆಗೆ ಅನುಕ್ರಮವಾಗಿ ನಡೆದ ಘಟನಾವಳಿಗಳು ನಮಗೆ ಈ ಕುರಿತು ಎಚ್ಚರಿಕೆ ರವಾನಿಸುತ್ತಿದ್ದು, ಎಡಪಂಥೀಯ ಕಾರ್ಯಕರ್ತರು ವಿವಿಗಳಲ್ಲಿ ಶಿಕ್ಷಣದ ವಾತಾವರಣವನ್ನು ಹದಗೆಡಿಸುತ್ತಿದ್ದಾರೆ. ಎಡ ಪಕ್ಷಗಳ ರಾಜಕೀಯದ ಕಾರಣ ಸಾರ್ವಜನಿಕವಾಗಿ ಮಾತುಕತೆ ನಡೆಸುವುದು ಹಾಗೂ ಮುಕ್ತವಾಗಿ ಹೇಳಿಕೆ ನೀಡುವುದು ಕಷ್ಟಕರವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಧರಣಿ ನಡೆಸುವುದು, ಆಂದೋಲನದಲ್ಲಿ ಭಾಗಿಯಾಗುವುದು, ಯಾವುದೇ ಓರ್ವ ವ್ಯಕ್ತಿಯನ್ನು ಗುರಿಯಾಗಿರುವುದು ಈ ಎಡಪಂಥೀಯ ಕಾರ್ಯಕರ್ತರ ಸಾಮಾನ್ಯ ಪ್ರಕ್ರಿಯೆಯಾಗಿದೆ. ಎಡಪಂಥೀಯ ವಿಚಾರಧಾರೆಯನ್ನು ಒಪ್ಪದೇ ಹೋದರೆ ಸಾರ್ವಜನಿಕವಾಗಿ ದೋಷಾರೋಪಣೆ ಮಾಡುವುದು ಮತ್ತು ಕಿರುಕುಳ ನೀಡುವ ಪ್ರಕ್ರಿಯೆ ತನ್ನ ಹದ್ದನ್ನು ದಾಟಿದೆ. ಈ ರೀತಿಯ ರಾಜಕೀಯ ಮಕ್ಕಳು, ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಇವರಲ್ಲಿ ಹೆಚ್ಚಿನವರು ಬಡ ಹಾಗೂ ಅಧಿಕಾರ ವಂಚಿತ ಸಮುದಾಯದವರಾಗಿದ್ದಾರೆ. ಈ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ಹಾಗೂ ಉತ್ತಮ ಭವಿಷ್ಯ ರೂಪಿಸುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಇವರುಗಳು ಲೆಫ್ಟ್ ರಾಜಕೀಯ ಮುಖಂಡರ ರಾಜಕೀಯ ದಾಳಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಶಕ್ತಿಗಳು ರಾಜಕೀಯ ಮರೆತು ಒಂದಾಗಿ ಎದ್ದು ನಿಲ್ಲುವ ಅಗತ್ಯತೆ ಇದೆ. ಇದರಿಂದ ಶೈಕ್ಷಣಿಕ, ವೈಚಾರಿಕ ಸ್ವಾತಂತ್ರ್ಯತೆಗಾಗಿ ಹಾಗೂ ಅಭಿವ್ಯಕ್ತಿ ಸ್ವಾಂತಂತ್ರ್ಯಗಾಗಿ ಒಂದಾಗಿ ಹೋರಾಡಬಹುದು ಎಂದು ಶಿಕ್ಷಣ ತಜ್ಞರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.