ಜಮ್ಮು-ಕಾಶ್ಮೀರದಿಂದ 370 ನೇ ವಿಧಿ ರದ್ದತಿ ಬಳಿಕ ಪಾಕಿಸ್ತಾನದಿಂದ 222ಕ್ಕೂ ಅಧಿಕ ಕದನ ವಿರಾಮ ಉಲ್ಲಂಘನೆ
ಪಾಕಿಸ್ತಾನ ಸೇನೆಯು ಈ ವರ್ಷ ಒಟ್ಟು 1,900 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ, ಕೇವಲ 25 ದಿನಗಳಲ್ಲಿ 222 ಕ್ಕೂ ಹೆಚ್ಚು ಘಟನೆಗಳು ವರದಿಯಾಗಿದೆ.
ಶ್ರೀನಗರ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ಆಗಸ್ಟ್ 5 ರಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದಾಗಿನಿಂದಲೂ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಪಡೆಗಳು 222 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ.
ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನ ಸೇನೆಯು ಈ ವರ್ಷ ಒಟ್ಟು 1,900 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ, 370 ನೇ ವಿಧಿಗಳನ್ನು ರದ್ದುಪಡಿಸಿದ ನಂತರ ಕೇವಲ 25 ದಿನಗಳಲ್ಲಿ 222 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.
ಆಗಸ್ಟ್ 5 ರಿಂದ ಪಾಕಿಸ್ತಾನದ ಸೈನ್ಯದ ಕದನ ವಿರಾಮ ಉಲ್ಲಂಘನೆಯ ಸರಾಸರಿ 10 ಘಟನೆಗಳು ನಡೆದಿವೆ, ಇದು ಆಗಾಗ್ಗೆ ಕದನ ಮತ್ತು ಪ್ರತಿದಿನ ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿಗೆ ಕಾರಣವಾಗುತ್ತದೆ.
ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪ್ರಾಬಲ್ಯ ಸಾಧಿಸಲು ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಕರಿಸುವ ಪಾಕಿಸ್ತಾನದ ಹತಾಶ ಪ್ರಯತ್ನಗಳನ್ನೂ ಈ ಅಂಕಿ ಅಂಶಗಳು ಸೂಚಿಸುತ್ತವೆ.
ಆದಾಗ್ಯೂ, ಪಾಕಿಸ್ತಾನದಿಂದ ಅಪ್ರಚೋದಿತ ಭಾರೀ ಶೆಲ್ ದಾಳಿಯ ಹೊರತಾಗಿಯೂ, ಭಾರತೀಯ ಸೈನ್ಯವು ನೆರೆಯ ಸೈನಿಕರಿಗೆ ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತಿದೆ.
ಜುಲೈ ತಿಂಗಳಲ್ಲಿ ಕೂಡ ಪಾಕಿಸ್ತಾನ ಪಡೆಯಿಂದ ಕನಿಷ್ಠ 296 ಕದನ ವಿರಾಮ ಉಲ್ಲಂಘನೆ ಘಟನೆಗಳು ವರದಿಯಾಗಿವೆ.
ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮತ್ತು ಶಾಂತಿಗೆ ಭಂಗ ತರುವಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಯಿಂದ ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದ ಒಳನುಸುಳಲು ಬೆಂಬಲ ನೀಡುತ್ತಿರುವ ಬಗ್ಗೆ ಗುಪ್ತಚರ ಎಚ್ಚರಿಕೆಗಳ ಮಧ್ಯೆ ಕದನ ವಿರಾಮ ಉಲ್ಲಂಘನೆ ಹೆಚ್ಚಾಗಿದೆ.
ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿ ಪ್ರಕಾರ, ಪ್ರತಿ ರಾತ್ರಿ ಒಳನುಸುಳುವಿಕೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸೂಚಿಸುತ್ತದೆ. ಕಾಶ್ಮೀರದಲ್ಲಿ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನ ಹೆಚ್ಚಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಎಂ) ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳನ್ನು ಗುರಿಯಾಗಿಸಲು ಭಾರಿ ಪ್ರಮಾಣದ ಒಳನುಸುಳುವಿಕೆಯನ್ನು ಯೋಜಿಸುತ್ತಿದೆ ಎಂದು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ವರದಿಯಲ್ಲಿ ತಿಳಿಸಲಾಗಿದೆ.
ಆಗಸ್ಟ್ 19 ರಂದು ಪಾಕಿಸ್ತಾನದ ಭಾವಲ್ಪುರದ ಮಾರ್ಕಾಜ್ ಉಸಾಮಾ-ಒ-ಅಲಿಯಲ್ಲಿ ಜೆಎಂ ಮುಖ್ಯಸ್ಥ ಮಾಲುನಾ ಮಸೂದ್ ಅಜರ್ ಅವರ ಸಹೋದರ ರೌಫ್ ಅಸ್ಗರ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಿರ್ಣಾಯಕ ಸಭೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿಗಳನ್ನು ಸ್ವೀಕರಿಸಲಾಗಿದೆ. ರೌಫ್ ಜೆಎಂನ ಸಶಸ್ತ್ರ ವಿಭಾಗದ ಕಮಾಂಡರ್.
ಕಾಶ್ಮೀರದಲ್ಲಿ ಶಾಂತಿಯನ್ನು ಭಂಗಗೊಳಿಸಲು ಸಂಭವನೀಯ ಭಯೋತ್ಪಾದಕ ದಾಳಿಯ ಬಗ್ಗೆ ಇತರ ಮಾಹಿತಿಗಳ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕರು ಶಾಲೆಗಳು, ಸರ್ಕಾರಿ ಕಟ್ಟಡಗಳು ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಬಹುದು.
ಈ ಎಲ್ಲದರ ಮಧ್ಯೆ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶುಕ್ರವಾರ ಕಾಶ್ಮೀರಕ್ಕೆ ಆಗಮಿಸಲಿದ್ದು, ಜಮ್ಮು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಲಿದ್ದಾರೆ. ಕೇಂದ್ರ ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಬಿಪಿನ್ ರಾವತ್ ಅವರ ಮೊದಲ ಭೇಟಿ ಇದಾಗಿದೆ.
ಪಾಕಿಸ್ತಾನವು ಭಾರತದ ವಿರುದ್ಧ ಕಠಿಣ ಅಭಿಯಾನವನ್ನು ಪ್ರಾರಂಭಿಸಿದ ಕಾರಣ ಕಣಿವೆಯಲ್ಲಿ ಅಂತರ್ಜಾಲ ಸೇವೆಗಳನ್ನು ಶೀಘ್ರದಲ್ಲಿ ಪುನಃಸ್ಥಾಪಿಸಲು ಅಸಂಭವವಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಮೂಲಗಳು ಹೇಳಿರುವ ಸಮಯದಲ್ಲಿ ಜನರಲ್ ರಾವತ್ ಅವರ ಶ್ರೀನಗರ ಭೇಟಿ ಮಹತ್ವ ಪಡೆದಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತಿದ್ದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಅನ್ನು ಮೋದಿ ಸರ್ಕಾರ ರದ್ದುಪಡಿಸಿದಾಗಿನಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಇದು ಅಂತರರಾಷ್ಟ್ರೀಯ ಸಮುದಾಯಕ್ಕೆ ಅವರ ಬೆಂಬಲ ಮತ್ತು ಹಸ್ತಕ್ಷೇಪಕ್ಕಾಗಿ ನಿರಂತರವಾಗಿ ಮನವಿ ಮಾಡುತ್ತಿದೆ.
ಆದಾಗ್ಯೂ, ಯುಎಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್ ಮತ್ತು ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಸೇರಿದಂತೆ ಎಲ್ಲಾ ಪ್ರಮುಖ ವಿಶ್ವ ಶಕ್ತಿಗಳು ಇದು ಭಾರತದ ಆಂತರಿಕ ವಿಷಯ ಎಂದು ಭಾರತದ ನಿರ್ಧಾರವನ್ನು ಬೆಂಬಲಿಸಿವೆ.