ಚೆನ್ನೈ: ಇತ್ತೀಚಿನ ದಿನಗಳಲ್ಲಿ ಟಿಕ್‌ಟಾಕ್‌ ಆಪ್ ಬಹಳ ಕ್ರೇಜ್ ಹುಟ್ಟಿಸಿದೆ. ಟಿಕ್‌ಟಾಕ್‌ ಬಳಕೆಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಎಷ್ಟರ ಮಟ್ಟಿಗೆ ಯುವ ಜನರನ್ನು ಆವರಿಸಿದೆ ಎಂದರೆ ಪ್ರಾಣ ಬಿಟ್ಟೆವು, ಟಿಕ್‌ಟಾಕ್‌ ಬಿಡೆವು ಎಂಬಂತ ಪರಿಸ್ಥಿತಿಗೆ ಹಲವರು ತಲುಪಿದ್ದಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ತಮಿಳುನಾಡಿನ ಅರಿಯಲೂರಿನಲ್ಲಿ ಒಂದು ಘಟನೆ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಟಿಕ್‌ಟಾಕ್‌ನಲ್ಲಿ ಮಗ್ನಳಾಗಿದ್ದ ಮಡದಿಗೆ ಟಿಕ್‌ಟಾಕ್‌ಗೆ ನೀಡುವ ಸಮಯವನ್ನು ಮನೆ, ಗಂಡ, ಮಕ್ಕಳಿಗೆ ನೀಡು. ಟಿಕ್‌ಟಾಕ್‌ನಲ್ಲಿ ಕಾಲಹರಣ ಮಾಡಬೇಡ ಎಂದು ಪತಿ ಬೈದು ಬುದ್ದಿ ಹೇಳಿದ್ದಕ್ಕೆ 24 ವರ್ಷ ವಯಸ್ಸಿನ ಅನಿತಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅನಿತಾ ಟಿಕ್‌ ಟಾಕ್‌ ಅನ್ನು ವಿಪರೀತ ಹಚ್ಚಿಕೊಂಡಿದ್ದಳು ಎನ್ನಲಾಗಿದ್ದು, ಟಿಕ್‌ಟಾಕ್‌ ಮಾಡುತ್ತಲೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.


29 ವರ್ಷ ವಯಸ್ಸಿನ ಪಳನಿವೆಲ್ಳನ್ ಎಂಬುವವರನ್ನು ವಿವಾಹವಾಗಿದ್ದ ಅನಿತಾ ಅವರಿಗೆ 4 ವರ್ಷದ ಮಗಳು ಮತ್ತು 2 ವರ್ಷದ ಗಂಡು ಮಗು ಇತ್ತು. ಕೃಷಿ ವ್ಯಾಪಾರದಲ್ಲಿದ್ದ ಪಳನಿವೆಲ್ ಕೆಲವು ವರ್ಷಗಳ ಹಿಂದೆ ಸಿಂಗಪುರಕ್ಕೆ ತೆರಳಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಮುಂಚಿತವಾಗಿ ವಿಡಿಯೋ ಚಿತ್ರೀಕರಿಸಿರುವ ಅನಿತಾ, ತನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತಿಯಲ್ಲಿ ಮನವಿ ಮಾಡಿದ್ದಾಳೆ.


ಟಿಕ್‌ಟಾಕ್‌ ವ್ಯಸನಿಯಾಗಿದ್ದ ಅನಿತಾ ಸದಾ ಇದರಲ್ಲೇ ಮಗ್ನರಾಗಿರುತ್ತಿದ್ದರು. ಮನೆ, ಮಕ್ಕಳ ಬಗ್ಗೆ ಗಮನ ನೀಡದೆ ನಿರ್ಲಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸದಾ ಟಿಕ್‌ಟಾಕ್‌ನಲ್ಲಿರುತ್ತಿದ್ದ ಅನಿತಾ ಮಕ್ಕಳ ಬಗ್ಗೆ ಗಮನ ನೀಡದ ಕಾರಣ ಕುಟುಂಬಸ್ಥರು ಈ ಬಗ್ಗೆ ಆಕೆಯ ಪತಿಯ ಬಳಿ ದೂರಿದ್ದರು. ಅನಿತಾಳ ಪತಿ ಟಿಕ್‌ಟಾಕ್‌ ಆಪ್ ಅನ್ನು ಡಿಲೀಟ್ ಮಾಡುವಂತೆ ತಿಳಿಸಿದ್ದರೂ ಆಕೆ ನಿರಾಕರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ದುರದೃಷ್ಟವಶಾತ್ ಅನಿತಾ ಟಿಕ್‌ಟಾಕ್‌ನಲ್ಲಿ ನಿರತರಾಗಿದ್ದಾಗ ಆಕೆಯ ಮಗಳು ಆಟವಾಡುತ್ತಾ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ. ಟಿಕ್‌ಟಾಕ್‌ನಲ್ಲಿ ನಿರತರಾಗಿದ್ದ ಅನಿತಾ ಅದನ್ನು ನಿರ್ಲಕ್ಷಿಸಿದ್ದಾರೆ. ಇದರಿಂದ ಕುಪಿತಗೊಂಡ ಕುಟುಂಬಸ್ಥರು ಮತ್ತೊಮ್ಮೆ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಪತಿಗೆ ಒತ್ತಾಯಿಸಿದ್ದು, ಮಕ್ಕಳ ಬಗ್ಗೆ ಆಕೆಗೆ ಗಮನ ಹರಿಸುವಂತೆ ತಿಳಿ ಹೇಳುವಂತೆ ಹೇಳಿದ್ದಾರೆ.


ಪಳನಿವಲ್ ಅನಿತಾಗೆ ಕರೆ ಮಾಡಿ ಮಗಳಿಗೆ ಪೆಟ್ಟಾದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಆಕೆಯ ಫೋನ್ ಅನ್ನು ಒಡೆದು ಹಾಕುವುದಾಗಿ ಪತಿ ಹೇಳಿದ್ದರು ಎನ್ನಲಾಗಿದೆ. ಪತಿ ಪಳನಿವಲ್ ಬೈದಿದ್ದರಿಂದ ಬೇಸರಗೊಂಡ ಅನಿತಾ ವೀಡಿಯೊ ಮಾಡುತ್ತಲೇ ಕೀಟನಾಶಕ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.