ಇಂದು 2ಜಿ ಸ್ಪೆಕ್ಟ್ರಮ್ ಹಗರಣ ತೀರ್ಪು
ಇಂದು ನಿರ್ಧಾರವಾಗಲಿದೆ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಭವಿಷ್ಯ...
ನವ ದೆಹಲಿ: ಏಳು ವರ್ಷಗಳ ಬಳಿಕ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ಇಂದು 2 ಜಿ ಸ್ಪೆಕ್ಟ್ರಮ್ ಪರವಾನಗಿಗಳ ದೋಷಾರೋಪಣೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳ ಕುರಿತು ತೀರ್ಪನ್ನು ಪ್ರಕಟಿಸಲಿದೆ. ವಿಶೇಷ ಸಿಬಿಐ ನ್ಯಾಯಾಲಯ ನೀಡುವ ತೀರ್ಪಿನ ಆಧಾರದ ಮೇಲೆ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಭವಿಷ್ಯ ನಿರ್ಧಾರವಾಗಲಿದೆ.
ಈಗಾಗಲೇ ದೆಹಲಿಯ ಪಟಿಯಾಲಾ ದಲ್ಲಿರುವ ನ್ಯಾಯಾಲಯಕ್ಕೆ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮಗಳು ಮತ್ತು ಸಂಸದೆ ಕನಿಮೋಳಿ ಆಗಮಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಸಂದಿಘ್ನತೆಗೆ ಸಿಲುಕಿಸಿದ ಹಗರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ಸಲ್ಲಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ತೀರ್ಪುಗಳನ್ನು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಘೋಷಿಸಲಿದ್ದಾರೆ.
2007-08ರಲ್ಲಿ 2 ಜಿ ಸ್ಪೆಕ್ಟ್ರಮ್ ಲೈಸೆನ್ಸ್ ಹಂಚಿಕೆಗೆ ಸಂಬಂಧಿಸಿದಂತೆ ಹಗರಣವು ರೂ. 1.76 ಲಕ್ಷ ಕೋಟಿ ನಷ್ಟಕ್ಕೆ ಕಾರಣವಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ ಮಾಡಿದೆ.
2 ಜಿ ಪರವಾನಗಿಗಳನ್ನು ಟೆಲಿಕಾಂ ಆಪರೇಟರ್ಗಳಿಗೆ ಉಚಿತ ಮತ್ತು ನ್ಯಾಯೋಚಿತ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಹಂಚಿಕೆಗೆ ಬದಲಾಗಿ ಮನಬಂದಂತೆ ಹಂಚಿಕೆ ಮಾಡಲಾಗಿದೆ ಎಂದು 2007-2008ರಲ್ಲಿ ಸಿಎಜಿ ವರದಿ ಹೇಳಿದೆ.
ಬಂಧನವಾಗಿ ಸುಮಾರು ಒಂದು ವರ್ಷಗಳ ನಂತರ ಎ.ರಾಜಾ ಜೈಲಿನಿಂದ ಬಿಡುಗಡೆಯಾಗಿದ್ದರು.