ಗ್ರೇಟರ್ ನೋಯಿಡಾ: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂರು ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ
6 ಮಹಡಿಗಳ ಈ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಪಕ್ಕದ ಮತ್ತೊಂದು ಕಟ್ಟಡದ ಮೇಲೆ ಬದ್ದ ಪರಿಣಾಮ ಆ ಕಟ್ಟಡವೂ ಕುಸಿದು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾ: ನಿರ್ಮಾಣ ಹಂತದ ಎರಡು ಕಟ್ಟಡಗಳು ಕುಸಿದ ಪರಿಣಾಮ ಮೂವರು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ.
ಗ್ರೇಟರ್ ನೋಯ್ಡಾದ ಷಾ ಬೆರಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಕಟ್ಟಡಗಳು ಮಂಗಳವಾರ ತಡರಾತ್ರಿ ಕುಸಿದುಬಿದ್ದಿದೆ. 6 ಮಹಡಿಗಳ ಈ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಪಕ್ಕದ ಮತ್ತೊಂದು ಕಟ್ಟಡದ ಮೇಲೆ ಬದ್ದ ಪರಿಣಾಮ ಆ ಕಟ್ಟಡವೂ ಕುಸಿದು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣ ವಸ್ತುಗಳ ಬಳಕೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈಗಾಗಲೇ ಆ ಕಟ್ಟಡಗಳಲ್ಲಿ ಫ್ಲಾಟ್ಗಳನ್ನು ಖರೀದಿಸಿದವರು ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಟ್ಟಡದ ಮಾಲೀಕರು ತಮ್ಮ ಖರೀದಿ ಹಣವನ್ನು ವಾಪಸ್ ನೀಡಬೇಕು ಮತ್ತು ಬಿಲ್ಡರ್'ಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಅಧಿಕಾರಿಗಳು ಕಟ್ಟಡಗಳ ಮಾಲೀಕ ಗಂಗಾ ಶರಣ್ ದ್ವಿವೇದಿ, ಬ್ರೋಕರ್ ಕಾಸಿಮ್ ಮತ್ತು ಮತ್ತೋರ್ವನನ್ನು ಈ ಘಟನೆ ಸಂಬಂಧ ಬಂಧಿಸಿದ್ದಾರೆ. ಈ ಪ್ರಕರಣದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಅಲ್ಲದೆ, ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸಲು JCB ಯಂತ್ರಗಳನ್ನೂ ಬಳಸಿಕೊಳ್ಳಲಾಗುತ್ತಿದೆ.
ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಕಟ್ಟಡದ ಅವಶೇಷಗಳನ್ನು ತೆರವು ಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮೃತಪಟ್ಟವರ ಸಂಖ್ಯೆ ಏರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ 3 ಮೃತದೇಹಗಳು ದೊರೆತಿರುವುದಾಗಿ ಎನ್ಡಿಆರ್ಎಫ್ ತಿಳಿಸಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೆ.ಪಿ.ಮೌರ್ಯ, "ಜಿಲ್ಲಾಡಳಿತ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಅವಶೇಷಗಳಡಿಯಲ್ಲಿ ಕೆಲವರು ಸಿಕ್ಕಿಹಾಕಿಕೊಂಡಿದ್ದಾರೆ. ಈ ಘಟನೆಯಲ್ಲಿ ಮೃತರಾದವರ ಕುಟುಂಬಗಳ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ" ಎಂದಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಗೌತಮ್ ಬುದ್ಧ ನಗರ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ವಿವರಾತ್ಮಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಕ್ಷಣಾ ನಿಯಮಗಳನ್ನು ಕಟ್ಟಡದ ಮಾಲೀಕರು ಉಲ್ಲಂಘಿಸಿದ್ದೇ ಆಗಿದ್ದಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.