ನವದೆಹಲಿ: ಗುಜರಾತ್‌ನ ಅಹಮದಾಬಾದ್ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಭಾನುವಾರ ಜೋಯ್ ರೈಡ್  ಕುಸಿದು ಬಿದ್ದು ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಭಾನುವಾರದಂದು ಮಧ್ಯಾಹ್ನ ನಡೆದಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕಂಕರಿಯಾ ಅಡ್ವೆಂಚರ್ ಪಾರ್ಕ್‌ನಲ್ಲಿನ 'ಡಿಸ್ಕವರಿ' ಜಾಯ್‌ ರೈಡ್‌ ಕುಸಿದು ಬಿದ್ದಾಗ ಅದರಲ್ಲಿ ಸುಮಾರು 40 ಜನರು ಇದ್ದರು ಎನ್ನಲಾಗಿದೆ.ಮೂಲಗಳ ಪ್ರಕಾರ ಈ ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಅಹಮದಾಬಾದ್ ಮಹಾನಗರ ಪಾಲಿಕೆ ಎಲ್ಜಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 15 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


ನಗರ ಮುನ್ಸಿಪಲ್ ಕಮಿಷನರ್ ವಿಜಯ್ ನೆಹ್ರಾ ಮತ್ತು ವಲಯ 6 ರ ಅಹಮದಾಬಾದ್ ಉಪ ಪೊಲೀಸ್ ಆಯುಕ್ತ ಬಿಪಿನ್ ಅಹೈರ್ ಘಟನೆಯ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದರು.ಎಫ್‌ಎಸ್‌ಎಲ್ ತಂಡದೊಂದಿಗೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ನೆಹ್ರಾ ತಿಳಿಸಿದ್ದಾರೆ.