ಉತ್ತರಭಾರತದಲ್ಲಿ ಭಾರೀ ಮಳೆ; 30 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
ಗುಡುಗು ಸಹಿತ ಭಾರೀ ಮಳೆಯಿಂದಾಗಿ ಕನಿಷ್ಟ 35ಕ್ಕೂ ಹೆಚ್ಚು ಮಂದಿ ಸಾವನನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನವದೆಹಲಿ: ಬುಧವಾರ ಸಂಜೆ ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದಾಗಿ ರಾಷ್ಟ್ರ ರಾಜಧಾನಿ ಸೇರಿದಂದೆ ಉತ್ತರ ಭಾರತದ ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಗುಡುಗು ಸಹಿತ ಭಾರೀ ಮಳೆಯಿಂದಾಗಿ ಕನಿಷ್ಟ 35ಕ್ಕೂ ಹೆಚ್ಚು ಮಂದಿ ಸಾವನನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಿರುಗಾಳಿ ಸಹಿತ ಭಾರಿ ಮಳೆ ಹಾಗೂ ಧೂಳು ಆವರಿಸಿಕೊಂಡಿದ್ದರಿಂದ ರಾಜಸ್ಥಾನದಲ್ಲೇ 22 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಕಂಬ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹಲವು ಜಾನುವಾರುಗಳೂ ಈ ಘಟನೆಯಿಂದ ಸಾವನ್ನಪ್ಪಿದ್ದು, ಅಪಾರ ಬೆಳೆ ಹಾನಿಯಾಗಿದೆ. ಉತ್ತರಾಖಂಡ್ ನ ಚಮೋಲಿಯಲ್ಲಿ ಸಿಡಿಲು ಬಡಿತದಿಂದಾಗಿ ಹಲವಾರು ಮನೆಗಳು ಹಾನಿಗೊಳಗಾಗಿದ್ದು, ಪ್ರಾಣಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ.
ಇನ್ನು, ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ತತ್ತರಿಸಿದ್ದ ದೆಹಲಿ ನಾಗರಿಕರಿಗೆ ಈ ಹವಾಮಾನ ಬದಲಾವಣೆ ತುಸು ನೆಮ್ಮದಿ ತಂದಿದ್ದರೂ ಧೂಳುಮಯವಾಗಿರುವುದು ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ. ದೆಹಲಿಯಲ್ಲಿ ನಿನ್ನೆ ಸಂಜೆ 7.30ರ ಸಮಯದಲ್ಲಿ 13.4ಮೀ.ಮೀ. ಮಳೆಯಾಗಿದೆ. ಅಲ್ಲದೆ, 40 ಡಿಗ್ರಿ ಇದ್ದ ದೆಹಲಿಯ ತಾಪಮಾನ, ಇದ್ದಕ್ಕಿದ್ದಂತೆ 14ಡಿಗ್ರಿಗೆಕಡಿಮೆಯಾಗಿದೆ.
ಬಿಹಾರ, ಉತ್ತರಪ್ರದೇಶ ಮತ್ತು ಪಂಜಾಬಿನ ಪೂರ್ವ ಭಾಗದಿಂದ ಬೀಸುತ್ತಿರುವ ಬಿರುಗಾಳಿಯಿಂದಾಗಿ ನಗರದಲ್ಲಿ ಮತ್ತಷ್ಟು ಮಳೆಯಾಗುವ ಸಂಭವೈದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮತ್ತೊಂದೆಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.