ರೈಲಿಗೆ ಸಿಲುಕಿ 335 ಕುರಿಗಳು ಮಾರಣಹೋಮ; ದಿಕ್ಕು ತೋಚದೆ ಕುರಿಗಾಯಿಗಳು ಕಂಗಾಲು!
30 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳುವ ಕುರಿಗಳು ರೈಲಿಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದು, ದಿಕ್ಕು ತೋಚದೆ ಕುರಿಗಾಯಿಗಳು ಕಂಗಾಲಾಗಿದ್ದಾರೆ.
ಮೆಹಬೂಬನಗರ: ತೆಲಂಗಾಣದ ಮೆಹಬೂಬನಗರ ಜಿಲ್ಲೆಯಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ. 3 ಕುಟುಂಬಗಳಿಗೆ ಸೇರಿದ 335ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಜೀವ ಕಳೆದುಕೊಂಡಿವೆ.ಮೆಹಬೂಬನಗರ ಜಿಲ್ಲೆಯ ಕೌಕುಂಟ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. 30 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳುವ ಕುರಿಗಳು ರೈಲಿಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದು, ದಿಕ್ಕು ತೋಚದೆ ಕುರಿಗಾಯಿಗಳು ಕಂಗಾಲಾಗಿದ್ದಾರೆ.
ಇದೀದ ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮೊರೆ ಹೋಗಿದ್ದಾರೆ. ದುರದೃಷ್ಟವಶಾತ್ ಆಗಿರುವ ಈ ದೊಡ್ಡ ನಷ್ಟಕ್ಕೆ ಕುರಿಗಾಯಿಗಳು ಪರಿಹಾರ ಪಡೆಯುವ ಸಾಧ್ಯತೆಗಳು ಮಸುಕಾಗಿವೆ. ಶುಕ್ರವಾರ ಸಂಜೆ ಕೌಕುಂಟ್ಲಾ ಮಂಡಲ್ ಪ್ರಧಾನ ಕಚೇರಿಯ ಸಮೀಪ ಈ ಘಟನೆ ನಡೆದಿದೆ. ರಾಜೋಲಿ ರೈಲ್ವೆ ಕೆಳಸೇತುವೆಯ ಕೆಳಗೆ ಕುರಿಹಿಂಡುಗಳನ್ನು ಮೇಯಿಸುತ್ತಿದ್ದ ವೇಳೆ ಬೀದಿನಾಯಿಗಳ ಗುಂಪೊಂದು ಅಟ್ಟಿಸಿಕೊಂಡು ಬಂದಿವೆ. ನಾಯಿಗಳ ಗುಂಪನ್ನು ನೋಡಿ ಹೆದರಿದ ಕುರಿಗಳು ಭಯದಿಂದಲೇ ಓಡುತ್ತಾ ಕೌಕುಂಟ ಗ್ರಾಮದ ಹೊರ ವಲಯದಲ್ಲಿರುವ ರೈಲು ಹಳಿಯತ್ತ ನುಗ್ಗಿವೆ. ಇದೇ ಸಂದರ್ಭದಲ್ಲಿ ಅತಿ ವೇಗದಲ್ಲಿ ಬಂದ ರೈಲು ಕುರಿಗಳಿಗೆ ಡಿಕ್ಕಿ ಹೊದೆದಿದೆ. ಪರಿಣಾಮ 335ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೆ ಮೃತಪಟ್ಟಿವೆ.
ಇದನ್ನೂ ಓದಿ: ಏಕೆ ಮೇಲ್ಜಾತಿಯವರು ಮಾತ್ರ ಆರೆಸೆಸ್ಸ್ ಮುಖ್ಯಸ್ಥರಾಗುತ್ತಾರೆ?-ಆಪ್ ಪ್ರಶ್ನೆ
ಕುರಿಗಳನ್ನು ಕಳೆದುಕೊಂಡ ಸಂತ್ರಸ್ತ ಮಾಲೀಕರು ತಮಗಾಗಿರುವ ದೊಡ್ಡ ನಷ್ಟದ ಬಗ್ಗೆ ಚಿಂತಿತರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘335 ಕುರಿಗಳ ಸಾವಿನಿಂದ ಒಟ್ಟು 33.5 ಲಕ್ಷ ರೂ. ನಷ್ಟವಾಗಿರುವುದಾಗಿ ತಿಳಿಸಿದ್ದಾರೆ. ಕುರಿಗಳ ಮೇಲೆಯೇ ತಮ್ಮ ಜೀವನ ಅವಲಂಬಿತವಾಗಿದ್ದು, ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ನಮಗೆ ದಿಕ್ಕೆ ತೋಚದಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ದೊಡ್ಡ ಸಂಕಷ್ಟದಲ್ಲಿರುವ ನಮಗೆ ಸರ್ಕಾರವೇ ಏನಾದರೂ ಸಹಾಯ ಮಾಡಬೇಕೆಂದು ಕುರಿಗಳ ಮಾಲೀಕರಾದ ಮಾಸಣ್ಣ, ದೂಲಣ್ಣ ಮತ್ತು ತಿರುಪತಯ್ಯ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.
ಗೊರ್ರೆಲ ಮೇಕಲ ಪೆಂಪಕಂದಾರ್ಲಾ ಸಂಘದ (GMPS) ಪ್ರಧಾನ ಕಾರ್ಯದರ್ಶಿ ಉಡುತ ರವೀಂದರ್ ಪ್ರಕಾರ, ‘ಕುರಿ ಅಥವಾ ಯಾವುದೇ ಪ್ರಾಣಿಗಳು ರೈಲು ಹಳಿಗಳಿಗೆ ಪ್ರವೇಶಿಸಿದರೆ ರೈಲ್ವೆ ಇಲಾಖೆ ಪರಿಹಾರ ನೀಡುವುದಿಲ್ಲ. ಕುರಿ ವಿತರಣಾ ಯೋಜನೆಯ ಅಂಗವಾಗಿ ಕುರಿಗಳನ್ನು ವಿತರಿಸಲಾಗಿದ್ದರೂ, ಅವುಗಳಿಗೆ ವಿಮೆಯು 1 ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಇದು ಬಹಳ ಹಿಂದೆಯೇ ಅವಧಿ ಮೀರಿದೆ. ಈ ನಿರ್ದಿಷ್ಟ ಘಟನೆಯ ಸಂದರ್ಭದಲ್ಲಿ ಕುರಿಯ ಮಾಲೀಕರು ಯಾವುದೇ ವಿಮೆಯನ್ನು ಹೊಂದಿಲ್ಲ. ಹೀಗಾಗಿ ಅವರಿಗೆ ಸರ್ಕಾರದಿಂದ ಪರಿಹಾರ ಸಿಗುವುದು ಕಷ್ಟ. ಪ್ರತಿದಿನ ಕನಿಷ್ಠ 100 ಕುರಿಗಳು ರೈಲ್ವೆ ಹಳಿಗಳಲ್ಲಿ, ರಸ್ತೆಗಳಲ್ಲಿ ಅಥವಾ ನಾಯಿಗಳ ದಾಳಿಗಳಿಂದ ಸಾಯುತ್ತವೆ. ಆದರೆ ಕುರಿಗಳ ಮಾಲೀಕರು ಇದಕ್ಕೆ ಪರಿಹಾರ ಪಡೆದ ಯಾವುದೇ ಉದಾಹರಣೆಗಳಿಲ್ಲ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: Viral Video: ನಾಗರ ಹಾವು ಮೊಟ್ಟೆ ಇಡುವ ವಿಡಿಯೋ ವೈರಲ್.!
ಈ ಹಿಂದೆ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಆಂಧ್ರಪ್ರದೇಶ ಸಿಎಂ ಆಗಿದ್ದಾಗ ಸಾವನ್ನಪ್ಪಿದ ಕುರಿಗಳಿಗೆ ವಿಮಾ ಪ್ರೀಮಿಯಂನ ಶೇ.50ರಷ್ಟು ಪಾವತಿಸುವ ಯೋಜನೆ ಇತ್ತು. ಉಳಿದ ಮತ್ತವನ್ನು ಕುರುಬರು ಭರಿಸಬೇಕಾಗಿತ್ತು. ಹೀಗಾಗಿ ಇಡೀ ಕುರಿಗಳನ್ನು ಈ ಯೋಜನೆಗೆ ಒಳಪಡಿಸಲಾಗಿತ್ತು. ಪ್ರತ್ಯೇಕ ತೆಲಂಗಾಣ ರಚನೆಯಾದ ನಂತರ ಕುರಿ ವಿತರಣಾ ಯೋಜನೆಗೆ ಚಾಲನೆ ನೀಡಿದಾಗ ಸಿಎಂ ಕೆ.ಚಂದ್ರಶೇಖರ್ ರಾವ್ ಈ ಯೋಜನೆಯಡಿ ವಿತರಿಸುವ ಕುರಿಗಳಿಗೆ ಮಾತ್ರವಲ್ಲದೆ ಇತರ ಎಲ್ಲ ಕುರಿಗಳಿಗೂ ವಿಮೆ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ’ವೆಂದು ರವೀಂದರ್ ಹೇಳಿದ್ದಾರೆ.
ಇದೇ ರೀತಿಯ ಘಟನೆ 2017ರ ಅಕ್ಟೋಬರ್ 24ರಂದು ತೆಲಂಗಾಣದಲ್ಲೇ ನಡೆದಿತ್ತು. ಸಿಕಂದರಾಬಾದ್ನಿಂದ ಕೊಲ್ಕತಾ ಹೋಗುತ್ತಿದ್ದ ಫಲಕ್ನುಮಾ ಎಕ್ಸ್ಪ್ರೆಸ್ ರೈಲಿನಡಿ ಸಿಲುಕಿ 400 ಕುರಿಗಳು ಮೃತಪಟ್ಟಿದ್ದವು. ಈ ಘಟನೆ ಯಾದಾದ್ರಿ ಭುವನಗಿರಿ ಜಿಲ್ಲೆಯ ರಾಮಣ್ಣಪೇಟೆ ಗ್ರಾಮದಲ್ಲಿ ನಡೆದಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.