ಜಾರ್ಖಂಡ್: ಪ್ರಸಾದ ಸೇವನೆ ಬಳಿಕ 40 ವಿದ್ಯಾರ್ಥಿಗಳು ಅಸ್ವಸ್ಥ
ವಸಂತ ಪಂಚಮಿ ಆಚರಣೆ ಬಳಿಕ ವಿದ್ಯಾರ್ಥಿಗಳಿಗೆ ಪ್ರಸಾದ ಹಂಚಲಾಗಿದ್ದು, ಪ್ರಸಾದ ಸೇವನೆ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಲೋಹರ್ದಾಗ(ಜಾರ್ಖಂಡ್) : ಪ್ರಸಾದ ಸೇವನೆ ಬಳಿಕ 40 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಭಾನುವಾರ ಸಂಭವಿಸಿದೆ. ವಸಂತ ಪಂಚಮಿ ಆಚರಣೆ ಬಳಿಕ ವಿದ್ಯಾರ್ಥಿಗಳಿಗೆ ಪ್ರಸಾದ ಹಂಚಲಾಗಿದ್ದು, ಪ್ರಸಾದ ಸೇವನೆ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ದಾರ್ ಆಸ್ಪತ್ರೆಯ ವೈದ್ಯರಾದ ಎಸ್.ಎಸ್. ಖಲೀದ್, ಈ ವರೆಗೂ 40 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿಷಪೂರಿತ ಆಹಾರ ಸೇವನೆಯಿಂದಾಗಿ ಮಕ್ಕಳಲ್ಲಿ ಹೊಟ್ಟೆನೋವು ಮತ್ತು ವಾಂತಿ ಸಂಭವಿಸಿದೆ. ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದಿದ್ದಾರೆ.
"ಆಡಳಿತವು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಘಟನೆಗೆ ಕಾರಣ ಏನೆಂಬುದನ್ನು ಕಂಡು ಹಿಡಿಯಲ್ಲಿ ಮಕ್ಕಳಿಗೆ ಹಂಚಲಾದ ಪ್ರಸಾದವನ್ನು ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಡಿಸ್ಟ್ರಿಕ್ಟ್ ಎಜುಕೇಶನ್ ಆಫೀಸರ್ ರತನ್ ಮಹವಾರ್ ತಿಳಿಸಿದ್ದಾರೆ.