ನವದೆಹಲಿ: ನೇಪಾಳದಲ್ಲಿ ಹಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವಿನ ಸಂಖ್ಯೆ 43ಕ್ಕೆ ತಲುಪಿದ್ದು, 24 ಜನರು ಕಾಣೆಯಾಗಿದ್ದಾರೆ. ಮಳೆಯಿಂದಾಗಿ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


COMMERCIAL BREAK
SCROLL TO CONTINUE READING

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಪ್ತಕೋಶಿ ನದಿ ನೀರಿನ ಹರಿವು ಕೂಡ ಹೆಚ್ಚಾಗಿದೆ ಎಂದು ಕೋಸಿ ಬ್ಯಾರೇಜ್‌ನಲ್ಲಿ ನಿಯೋಜಿತರಾದ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ. ಶನಿವಾರ ಸಂಜೆ ಸಪ್ತಕೋಶಿ ನದಿಯಲ್ಲಿ ನೀರಿನ ಹರಿವು 3.7 ಲಕ್ಷ ಕ್ಯೂಸೆಕ್ ಎಂದು ಅಳೆಯಲಾಗಿದೆ. 



ಅಪಾಯದ ಮಟ್ಟ ತಲುಪಿರುವ ನೀರಿನ ಹರಿವಿನಿಂದಾಗಿ ಆಗಬಹುದಾದ ಅಪಾಯಗಳನ್ನು ತಪ್ಪಿಸುವ ಉದ್ದೇಶದಿಂದ ಅಲ್ಲಲ್ಲಿ ಕೆಂಪು ದೀಪಗಳನ್ನು ಅಳವಡಿಸಲಾಗಿದೆ. ಇದೇ ವೇಳೆ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿರುವ ಜಿಲ್ಲಾಡಳಿತ, ಜನರು ಮನೆಯಿಂದ ಹಿರಬರದಂತೆ ಎಚ್ಚರಿಕೆ ನೀಡಿದೆ. ಸನ್ಸಾರಿ, ಮೊರಾಂಗ್ ಮತ್ತು ಸಪ್ತಾರಿ ಸೇರಿದಂತೆ ಹಲವು ಪ್ರದೇಶಗಳು ಪ್ರವಾಹ ಪೀಡಿತವಾಗಿವೆ ಎಂದು ಹೇಳಲಾಗಿದೆ.


ದೇಶಾದ್ಯಂತ 200 ಕ್ಕೂ ಹೆಚ್ಚು ಸ್ಥಳಗಳನ್ನು ಮಾನ್ಸೂನ್ ಸಂಬಂಧಿತ ವಿಪತ್ತುಗಳಿಗೆ ಗುರಿಯಾಗಿರುವ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಮತ್ತು ಶೋಧ ಕಾರ್ಯಾಚರಣೆಗಳಲ್ಲಿ ನಿರತವಾಗಿವೆ ಎಂದು ನೇಪಾಳದ ತುರ್ತು ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಬೇದ್ ನಿಧಿ ಖನಾಲ್ ತಿಳಿಸಿದ್ದಾರೆ.