ನವದೆಹಲಿ: ಪಾಕಿಸ್ತಾನದ ಬಾಲಕೋಟ್‌ನ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರದಲ್ಲಿ ಆತ್ಮಾಹುತಿ ಬಾಂಬರ್‌ಗಳೂ ಸೇರಿದಂತೆ ಪ್ರಸ್ತುತ 45-50 ಭಯೋತ್ಪಾದಕರು ತರಬೇತಿ ಪಡೆಯುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.


COMMERCIAL BREAK
SCROLL TO CONTINUE READING

ಫೆಬ್ರವರಿ 26ರಂದು ಭಾರತೀಯ ವಾಯುಸೇನೆಯ ಮಿರಾಜ್ 2000 ಫೈಟರ್ ಜೆಟ್‌ಗಳು ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರವನ್ನು ನಾಶಪಡಿಸಿತ್ತು. ಆದರೀಗ ಅಲ್ಲಿ ಮತ್ತೆ ಶಿಬಿರಗಳು ಸಕ್ರಿಯವಾಗಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 


ದಟ್ಟ ಕಾಡಿನ ಮಧ್ಯೆ ಬೆಟ್ಟದ ತುದಿಯಲ್ಲಿರುವ ಭಯೋತ್ಪಾದಕ ಶಿಬಿರವು ಸುಧಾರಿತ ತರಬೇತಿ ಕೇಂದ್ರವಾಗಿದ್ದು, ಅಲ್ಲಿ ಆತ್ಮಾಹುತಿ ಬಾಂಬರ್‌ಗಳಿಗೆ ತರಬೇತಿ ನೀಡಲಾಗುತ್ತಿತ್ತು. ಗುಪ್ತಚರ ಮೂಲಗಳ ಪ್ರಕಾರ, ಜೆಇಎಂ ಮತ್ತು ಪಾಕಿಸ್ತಾನ ಮೂಲದ ಇತರ ಭಯೋತ್ಪಾದಕ ಗುಂಪುಗಳಿಗೆ ಬಾಲಕೋಟ್ ಒಂದು ಪ್ರಮುಖ ತರಬೇತಿ ಕೇಂದ್ರವಾಗಿತ್ತು.


ಅಂದು ನಡೆದ ವೈಮಾನಿಕ ದಾಳಿಯಲ್ಲಿ ನಾಶವಾದ ಭಯೋತ್ಪಾದಕ ಶಿಬಿರವು ಸುಮಾರು 6 ಎಕರೆ ಪ್ರದೇಶದಲ್ಲಿ ಹರಡಿದ್ದು, ಭಯೋತ್ಪಾದಕ ತರಬೇತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಕೇಂದ್ರವಾಗಿತ್ತು. ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಇತರ ಹಿರಿಯ ಭಯೋತ್ಪಾದಕರು ಈ ಭಯೋತ್ಪಾದಕ ಶಿಬಿರಕ್ಕೆ ನಿಯಮಿತವಾಗಿ ಭೇಟಿ ನೀಡಿ, ನೂತನವಾಗಿ ನೇಮಕಗೊಂಡವರಿಗೆ ಸ್ಪೂರ್ತಿದಾಯಕ ಉಪನ್ಯಾಸಗಳನ್ನು ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 


ಪಾಕಿಸ್ತಾನದ ಬಾಲಕೋಟ್ನಲ್ಲಿನ ಭಯೋತ್ಪಾದಕ ಶಿಬಿರವನ್ನು ಪುನಃ ಸಕ್ರಿಯಗೊಳಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇತ್ತೀಚೆಗಷ್ಟೇ ಹೇಳಿದ್ದರು. ಇದೀಗ ಸರ್ಕಾರಿ ಮೂಲಗಳು ಇದನ್ನು ಮತ್ತೊಮ್ಮೆ ಪುನರುಚ್ಚರಿಸಿವೆ.