ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಕುರಿತಂತೆ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದೇಶಾದ್ಯಂತ ಸೆಪ್ಟೆಂಬರ್ 26 ಮತ್ತು 27 ರಂದು ಕರೆ ನೀಡಲಾಗಿದ್ದ ಎರಡು ದಿನಗಳ ಮುಷ್ಕರವನ್ನು ಮುಂದೂಡಲಾಗಿದೆ. ನಾಲ್ಕು ಅಧಿಕಾರಿಗಳ ಸಂಘಟನೆಗಳ ನಿಯೋಗ ಸೋಮವಾರ ಹಣಕಾಸು ಕಾರ್ಯದರ್ಶಿಯನ್ನು ಭೇಟಿಯಾದ ನಂತರ ಜಂಟಿ ಹೇಳಿಕೆ ನೀಡಿದ್ದು, ಈ ವಿಷಯ ತಿಳಿಸಿದೆ.


COMMERCIAL BREAK
SCROLL TO CONTINUE READING

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‌ಬಿಒಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ನೊಬೊ) ಸೇರಿದಂತೆ ಬ್ಯಾಂಕ್ ಅಧಿಕಾರಿಗಳ ಸಂಘ ಇಂದು ಕೇಂದ್ರ ಹಣಕಾಸು ಕಾರ್ಯದರ್ಶಿಯನ್ನು ಭೇಟಿಯಾಗಿ, ಬಳಿಕ ಜಂಟಿ ಹೇಳಿಕೆ ನೀಡಿದೆ.


ಜಂಟಿ ಹೇಳಿಕೆಯ ಪ್ರಕಾರ, "ಎಲ್ಲಾ ಬ್ಯಾಂಕುಗಳ ಗುರುತನ್ನು ಕಾಪಾಡುವುದು ಸೇರಿದಂತೆ 10 ಬ್ಯಾಂಕುಗಳ ಉದ್ದೇಶಿತ ವಿಲೀನದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡ ಸಮಿತಿಯೊಂದನ್ನು ರಚಿಸುವ ಬಗ್ಗೆ ಹಣಕಾಸು ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಬೇಡಿಕೆಗಳನ್ನೂ ಈಡೇರಿಸುವ ಭರವಸೆಯನ್ನೂ ನೀಡಿದ್ದಾರೆ." ಈ ಹಿನ್ನಲೆಯಲ್ಲಿ ಸೆ.26, 27ರಂದು ಕರೆ ನೀಡಲಾಗಿದ್ದ ಮುಷ್ಕರವನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.


ಪಿಎಸ್‌ಯುಗಳ ವಿಲೀನಕ್ಕೆ ಸಂಬಂಧಿಸಿದ ವಿಷಯಗಳು, ವೇತನ ಪರಿಷ್ಕರಣೆ, ವಾರದಲ್ಲಿ ಐದು ದಿನಗಳ ಕೆಲಸ, ಮೂರನೇ ವ್ಯಕ್ತಿಗಳ ಉತ್ಪನ್ನ ಮಾರಾಟಕ್ಕೆ ತಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಬ್ಯಾಂಕ್ ಯೂನಿಯನ್ ಒಕ್ಕೂಟಗಳು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಭೇಟಿಯಾಗಿದ್ದವು. ಈ ಸಂದರ್ಭದಲ್ಲಿ ಬ್ಯಾಂಕ್ ಒಕ್ಕೂಟಕ್ಕೆ ಸಕಾರಾತ್ಮಕ ಬೆಂಬಲ ದೊರೆತಿದ್ದು, ಬ್ಯಾಂಕ್ ಮುಷ್ಕರವನ್ನು ಕೈ ಬಿಟ್ಟಿರುವುದಾಗಿ ಬ್ಯಾಂಕ್ ಒಕ್ಕೂಟದ ಪ್ರಕಟಣೆ ತಿಳಿಸಿದೆ.