ಭೋಪಾಲ್: ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆಗೂ ಮುನ್ನವೇ, ಶಿವರಾಜ್ ಸಿಂಗ್ ಚೌಹಾನ್ ಸರ್ಕಾರ ಐವರು ಧಾರ್ಮಿಕ ಮುಖಂಡರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದೆ. ಅವರು ಕಂಪ್ಯೂಟರ್ ಬಾಬಾ, ಭಾಯಿಜಿ ಮಹಾರಾಜ್, ನರಮಮಾನಂದಜೀ, ಹರಿಹರಾನಂದಜೀ ಮತ್ತು ಪಂಡಿತ್ ಯೋಗೇಂದ್ರ ಮಹಂತ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಈ ಧಾರ್ಮಿಕ ಮುಖಂಡರನ್ನು ಮಂತ್ರಿಗಳನ್ನಾಗಿ ಮಾಡುವ ಮುನ್ನ ಶಿವರಾಜ್ ಸಿಂಗ್ ಚೌವಾನ್ ನೇತೃತ್ವದ ಬಿಜೆಪಿ ಸರ್ಕಾರ ಒಂದು ಸಮಿತಿಯನ್ನು ರಚಿಸಿತ್ತು. ತೋಟ, ನೀರಿನ ಸಂರಕ್ಷಣೆ ಮತ್ತು ನರ್ಮದಾ ನದಿಯ ಶುಚಿತ್ವ ಕುರಿತು ಜಾಗೃತಿ ಮೂಡಿಸುವುದು ಈ ಸಮಿತಿಯ ರಚನೆಯ ಉದ್ದೇಶವಾಗಿತ್ತು. ಈ ಸಮಿತಿಗೆ ಐವರು ಧಾರ್ಮಿಕ ಮುಖಂಡರನ್ನು ನೇಮಿಸಲಾಗಿದೆ. ಸಮಿತಿಯ ಸದಸ್ಯರಾಗಿರುವ ಕಾರಣ ಸಚಿವರಿಗೆ ಸಿಗುವ ಎಲ್ಲಾ ಸವಲತ್ತುಗಳು ಈ ಸ್ವಾಮೀಜಿಗಳಿಗೂ ದೊರೆಯಲಿದೆ.


ಬಿಜೆಪಿ ಸರ್ಕಾರದ ಈ ನಡೆಯನ್ನು ಖಂಡಿಸಿರುವ ಕಾಂಗ್ರೆಸ್, ಧಾರ್ಮಿಕ ಮುಖಂಡರಿಗೆ ಸಮಾಜದಲ್ಲಿ ಇರುವ ಗೌರವವನ್ನು ಬಿಜೆಪಿ ಹಾಳು ಮಾಡುತ್ತಿದೆ. ಇದೊಂದು ಪೊಲಿಟಿಕಲ್ ಗಿಮಿಕ್, ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​​ ತನ್ನ ಪಾಪಗಳನ್ನು ತೊಳೆದುಕೊಳ್ಳುವ ಯತ್ನವಿದು ಎಂದು ಕಾಂಗ್ರೆಸ್​ ವಕ್ತಾರರಾದ ಪಂಕಜ್ ಚತುರ್ವೇದಿ ಟೀಕಿಸಿದ್ದಾರೆ. 


ಇದಕ್ಕೆ ಬಿಜೆಪಿ ವಕ್ತಾರ ರಜನೀಶ್​​ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಸ್ವಾಮೀಜಿಗಳಿಗೆ ಸಂಬಂಧಿಸಿದ ಯಾವುದೇ ವಿಷಯ ವಿರೋಧ ಪಕ್ಷಕ್ಕೆ ಇಷ್ಟವಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಪರಿಸರ ಹಾಗೂ ನದಿ ಸಂರಕ್ಷಣೆಯ ಕಾರ್ಯ ಸುಲಭವಾಗಲಿ ಎಂಬ ಉದ್ದೇಶದಿಂದ ಸ್ವಾಮೀಜಿಗಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ. ಸಾರ್ವಜನಿಕರ ಭಾಗವಹಿಸುವಿಕೆಯ ನಿಟ್ಟಿನಲ್ಲಿ ನರ್ಮದಾ ನದಿ ಸಂರಕ್ಷಣೆಗೆ ಸ್ವಾಮೀಜಿಗಳನ್ನು ಕರೆತರಲಾಗಿದೆ ಎಂದು ಅಗರ್ವಾಲ್ ಬಿಜೆಪಿ ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.