ನವದೆಹಲಿ: ಭಾನುವಾರ (ಡಿಸೆಂಬರ್ 29) ರಾತ್ರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕಾರು ಕಾಲುವೆಗೆ ಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ. ರಾತ್ರಿ 11.40 ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮಾರುತಿ ಎರ್ಟಿಗಾ ಕಾರಿನ ಇತರ ಐದು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಡಂಕೌರ್ ಪ್ರದೇಶದ ಖೇರ್ಲಿ ಕಾಲುವೆಗೆ ಬಿದ್ದ ಮಾರುತಿ ಎರ್ಟಿಗಾದಲ್ಲಿ ಒಟ್ಟು 11 ಜನರು ಪ್ರಯಾಣಿಸುತ್ತಿದ್ದರು. ಎಲ್ಲ 11 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತರನ್ನು ಮಹೇಶ್ (35), ಕಿಶನ್ಲಾಲ್ (50), ನೀರೇಶ್ (17), ರಾಮ್ ಖಿಲಾಡಿ (75), ಮಲ್ಲು (12), ನೇತ್ರಪಾಲ್ (40) ಎಂದು ಗುರುತಿಸಲಾಗಿದೆ. 


ದಟ್ಟ ಮಂಜಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಏತನ್ಮಧ್ಯೆ, ಸೋಮವಾರ ಕೂಡ ರಾಷ್ಟ್ರ ರಾಜಧಾನಿಯಲ್ಲಿ ದಟ್ಟವಾದ ಮಂಜು ಆವರಿಸಿದೆ. ಶೂನ್ಯದಿಂದ 100 ಮೀಟರ್ ನಡುವೆ ಗೋಚರತೆಯನ್ನು ದಾಖಲಿಸಲಾಗಿದೆ. ಬೆಳಿಗ್ಗೆ 5.30 ಕ್ಕೆ ದಾಖಲಾದ ತಾಪಮಾನವು ಸಫ್ದರ್ಜಂಗ್ ಬಳಿ 4.6 ಡಿಗ್ರಿ ಸೆಲ್ಸಿಯಸ್ ಮತ್ತು ಪಾಲಂನಲ್ಲಿ 4.8 ಡಿಗ್ರಿ. ಗೋಚರತೆಯು ಪಾಲಂ ಪ್ರದೇಶದ ಬಳಿ ಶೂನ್ಯಕ್ಕೆ ಮತ್ತು ದೆಹಲಿಯ ಸಫ್ದರ್ಜಂಗ್ ಬಳಿ 100 ಮೀಟರ್‌ಗೆ ಇಳಿಯಿತು.


ತೀವ್ರ ಮಂಜಿನ ವಾತಾವರಣದಿಂದಾಗಿ ಹಲವಾರು ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿವೆ. ಕೆಟ್ಟ ಹವಾಮಾನದಿಂದಾಗಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟರ್‌ನಲ್ಲಿ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಹಾರಾಟದ ಕಾರ್ಯಾಚರಣೆಗಳ ಬಗ್ಗೆ ಅಪ್ಡೇಟ್ ಪಡೆಯಲು ಪ್ರಯಾಣಿಕರು ವಿಮಾನಯಾನ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರುವಂತೆ ಮನವಿ ಮಾಡಲಾಗಿದೆ.