ಕೋಲ್ಕತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗುರುವಾರ ವೇಗವಾಗಿ ಚಲಿಸುತ್ತಿದ್ದ ಟ್ರಕ್, ಎಸ್ಯುವಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿವಾಹ ಕಾರ್ಯಕ್ರಮಕ್ಕೆ ತೆರಳಲು ಆಗಮಿಸುತ್ತಿದ್ದ ಇತರ ವಾಹನಗಳಿಗಾಗಿ ಕಾಯುತ್ತಿದ್ದ ಎಸ್‌ಯುವಿಯನ್ನು ಕಲಿಯಾಚಕ್‌ನ ರಾಷ್ಟ್ರೀಯ ಹೆದ್ದಾರಿ 34 ಎ ಬದಿಯಲ್ಲಿ ನಿಲ್ಲಿಸಿದ್ದಾಗ, ಮುಂಜಾನೆ  ಅಪಘಾತ ಸಂಭವಿಸಿದೆ.


"ವೇಗವಾಗಿ ಬಂದ ಟ್ರಕ್ ಹಿಂದಿನಿಂದ ಎಸ್‌ಯುವಿಗೆ ಡಿಕ್ಕಿ ಹೊಡೆದು ರಸ್ತೆಬದಿಯ ಹಳ್ಳಕ್ಕೆ ಉರುಳಿದೆ. ಅಪಘಾತದಲ್ಲಿ ಮೂವರು ಪ್ರಯಾಣಿಕರುಸ್ಥಳದಲ್ಲೇ ಸಾವನ್ನಪ್ಪಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.


ಸ್ಥಳೀಯ ಮೂಲಗಳ ಪ್ರಕಾರ, ವಿವಾಹದ ಅತಿಥಿಗಳು ಮದುವೆಗೆ ಹಾಜರಾಗಲು ಅದೇ ಜಿಲ್ಲೆಯ ಕಲಿಯಾಚಕ್‌ನಿಂದ ಗಜೋಲ್‌ಗೆ ತೆರಳುತ್ತಿದ್ದರು ಎನ್ನಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


"ಗಾಯಗೊಂಡವರಲ್ಲಿ ಐವರು ಮಾಲ್ಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡ ಆರು ಮಂದಿಯನ್ನು ಕೋಲ್ಕತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.


ಅಪಘಾತದ ಬಳಿಕ ಟ್ರಕ್ನೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಗಜೋಲ್ನಿಂದ ಬಂಧಿಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.