ಛತ್ತೀಸ್ಗಢ್ ವಿಧಾನಸಭೆ ಚುನಾವಣೆ: 90 ಚುನಾಯಿತ ಶಾಸಕರ ಪೈಕಿ 68 ಮಂದಿ ಕೋಟ್ಯಾಧಿಪತಿಗಳು!
ಕಾಂಗ್ರೆಸಿನ 68 ಶಾಸಕರಲ್ಲಿ 48 ಶಾಸಕರು, ಬಿಜೆಪಿಯ 15 ಶಾಸಕರ ಪೈಕಿ 14 ಶಾಸಕರು, ಛತ್ತೀಸ್ಗಢ್ ಜನತಾ ಕಾಂಗ್ರೆಸ್ ನ ಐದು ಶಾಸಕರು ಮತ್ತು ಬಹುಜನ ಸಮಾಜವಾದಿ ಪಕ್ಷದ ಇಬ್ಬರು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ.
ರಾಯ್ಪುರ್: ಛತ್ತೀಸ್ಗಢ್ ನಲ್ಲಿ ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 68 ಕೋಟ್ಯಾಧಿಪತಿ ಶಾಸಕರು ವಿಧಾನಸಭೆ ತಲುಪಿದ್ದಾರೆ. ಛತ್ತೀಸ್ಗಢ್ ಎಲೆಕ್ಷನ್ ವಾಚ್ ಮತ್ತು ಡೆಮಾಕ್ರಟಿಕ್ ರಿಫಾರ್ಮ್ಸ್ ಅಸೋಸಿಯೇಷನ್ (ಎಡಿಆರ್) ಛತ್ತೀಸ್ಗಢದಲ್ಲಿ ಇತ್ತೀಚಿಗೆ ಆಯ್ಕೆಯಾದ 90 ಶಾಸಕರ ಅಫಿಡವಿಟ್ಗಳನ್ನು ವಿಶ್ಲೇಷಿಸಿವೆ. ವರದಿ ಪ್ರಕಾರ, 68 ಕೋಟ್ಯಾಧಿಪತಿ ಶಾಸಕರು ಈ ಬಾರಿ ಚುನಾಯಿತರಾಗಿದ್ದಾರೆ.
ವರದಿ ಪ್ರಕಾರ, 2018 ರಲ್ಲಿ 76% ನಷ್ಟು ಮಿಲೇನಿಯರ್ ಗಳು ಶಾಸಕರಾಗಿ ಚುನಾಯಿತರಾಗಿದ್ದಾರೆ. 2013 ರಲ್ಲಿ, 90 ರಲ್ಲಿ 67 ಮಂದಿ ಅಂದರೆ 74% ಮತ್ತು 2008 ರಲ್ಲಿ, 30 (35%) ಕೋಟ್ಯಾಧಿಪತಿಗಳು ಶಾಸಕರಾಗಿ ಚುನಾಯಿತರಾಗಿದ್ದರು.
ವರದಿ ಅನ್ವಯ, ಕಾಂಗ್ರೆಸಿನ 68 ಶಾಸಕರಲ್ಲಿ 48 ಶಾಸಕರು, ಬಿಜೆಪಿಯ 15 ಶಾಸಕರ ಪೈಕಿ 14 ಶಾಸಕರು, ಛತ್ತೀಸ್ಗಢ್ ಜನತಾ ಕಾಂಗ್ರೆಸ್ ನ ಐದು ಶಾಸಕರು ಮತ್ತು ಬಹುಜನ ಸಮಾಜವಾದಿ ಪಕ್ಷದ ಇಬ್ಬರು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಎಡಿಆರ್ ವರದಿಯ ಪ್ರಕಾರ, ಅಂಬಿಕಾಪುರ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಟಿ.ಎಸ್. ಸಿಂಹದೇವ್ 500 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಛತ್ತೀಸ್ಗಢ್ ಜನತಾ ಕಾಂಗ್ರೆಸ್ ನ ಖೈರಗಢ್ ಕ್ಷೇತ್ರದ ಶಾಸಕ ದೇವ್ರಾತ್ ಸಿಂಗ್ ಸುಮಾರು 119 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.
ರಾಜೀಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮಿತಾಭ್ ಶುಕ್ಲಾ 74 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ. ಅಮಿತಾಬ್ ಶುಕ್ಲಾ ಅವಿಭಜಿತ ಮಧ್ಯಪ್ರದೇಶ ಮುಖ್ಯಮಂತ್ರಿ ಶ್ಯಾಮಚರನ್ ಶುಕ್ಲಾ ಅವರ ಪುತ್ರರಾಗಿದ್ದಾರೆ. ವರದಿಯ ಪ್ರಕಾರ, ಈ ವಿಧಾನಸಭೆಯಲ್ಲಿ ಚುನಾಯಿತರಾದ ಕಾಸ್ಡಾಲ್ನ ಕಾಂಗ್ರೆಸ್ ಶಾಸಕರಾದ ಶಕುಂತಲಾ ಸಾಹು ಅವರ ಬಳಿ 5,75,000 ರೂ. ಗೂ ಅಧಿಕ ನಗದು ಮತ್ತು ಭರತ್ ಪುರ್ ಸೋನಾಹತ್ ಕ್ಷೇತ್ರದ ಗುಲಾಬ್ ಸಿಂಗ್ ಕಮರೋ ಬಳಿ 5,42,000 ರೂ.ಗೂ ಅಧಿಕ ನಗದಿದೆ. 90 ಶಾಸಕರಲ್ಲಿ ಚಂದ್ರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮ್ ಕುಮಾರ್ ಯಾದವ್ ಅವರ ಬಳಿ 30,464 ರೂ. ನಗದು ಮಾತ್ರ ಇದ್ದು ಅತಿ ಕಡಿಮೆ ಸಂಪತ್ತುಳ್ಳ ಶಾಸಕರಾಗಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ ಇವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ.
ವರದಿಯ ಪ್ರಕಾರ, 90 ಶಾಸಕರ ಪೈಕಿ 27 ಮಂದಿ ವಿದ್ಯಾರ್ಹತೆ ಐದನೇ ತರಗತಿಯಿಂದ ಮತ್ತು 12 ತರಗತಿ ಎಂದು ಘೋಷಿಸಲಾಗಿದೆ. 32 ಎಮ್ಎಲ್ಎಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಪದವಿಪೂರ್ವ ಮತ್ತು ಉನ್ನತ ಮಟ್ಟದ ವಿದ್ಯಾಭ್ಯಾಸ ಎಂದು ಘೋಷಿಸಿದ್ದಾರೆ. ಓರ್ವ ಶಾಸಕ ತನ್ನ ಶೈಕ್ಷಣಿಕ ವಿದ್ಯಾರ್ಹತೆ ಸಾಕ್ಷರ ಎಂದು ಘೋಷಿಸಿದ್ದಾರೆ. ವರದಿಯ ಪ್ರಕಾರ, 16 ಶಾಸಕರ ವಯಸ್ಸು 25 ರಿಂದ 40 ವರ್ಷಗಳವರೆಗೆ ಇದ್ದರೆ, 54 ಶಾಸಕರು 41 ರಿಂದ 60 ವರ್ಷದವರಾಗಿದ್ದಾರೆ. ಅದೇ ಸಮಯದಲ್ಲಿ, 20 ಶಾಸಕರು 61 ರಿಂದ 80 ವಯೋಮಾನದವರಾಗಿದ್ದಾರೆ.
ಪಾಥೊಲಂಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ರಾಮ್ಪುಕ್ ಸಿಂಗ್(79) ಅತ್ಯಂತ ಹಿರಿಯ ವಯಸ್ಸಿನ ಶಾಸಕರಾಗಿದ್ದಾರೆ. ಭಿಲಾಯ್ ನಗರದ ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ (27) ಮತ್ತು ಪಾಂಗಢ ಕ್ಷೇತ್ರದ ಬಹುಜನ ಸಮಾಜವಾಗಿ ಪಕ್ಷದ ಶಾಸಕ ಇಂದು ಬಂಜಾರೆ (27) ಕಿರಿಯ ವಯಸ್ಸಿನ ಶಾಸಕರಾಗಿದ್ದಾರೆ.