ಮುಂಬೈ:  'ಅಪಾಯದಲ್ಲಿರುವ' ದೇಶಗಳಿಂದ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ (institutional quarantine) ಒಳಗಾಗಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. 


COMMERCIAL BREAK
SCROLL TO CONTINUE READING

ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಕಡ್ಡಾಯ ಐಸೋಲೇಶನ್ (compulsory isolation) ಸೌಲಭ್ಯಗಳಲ್ಲಿ ಇರಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲಾಗಿದೆ. ಪ್ರಯಾಣಿಕರು ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. 


ಈ ಪ್ರಯಾಣಿಕರು ಕೋವಿಡ್‌ಗಾಗಿ ಮೂರು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು (RT-PCR tests for Covid) ತೆಗೆದುಕೊಳ್ಳಬೇಕಾಗುತ್ತದೆ. ಆಗಮನದ ನಂತರ ಎರಡನೇ, ನಾಲ್ಕನೇ ಮತ್ತು ಏಳನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.


ಕೊರೊನಾ ಪಾಸಿಟಿವ್ ಬರುವ ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ನೆಗೆಟಿವ್ ಪರೀಕ್ಷೆ ಮಾಡಿದವರು ಹೆಚ್ಚುವರಿಯಾಗಿ ಏಳು ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. 


ರಾಜ್ಯಕ್ಕೆ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು, ಅವರು ಕಳೆದ 15 ದಿನಗಳಲ್ಲಿ ಭೇಟಿ ನೀಡಿದ ದೇಶಗಳ ವಿವರವನ್ನು ಸಲ್ಲಿಸಬೇಕು. ಆಗಮನದ ನಂತರ ಇದನ್ನು ಪರಿಶೀಲಿಸಲಾಗುತ್ತದೆ. ತಪ್ಪಾದ ಮಾಹಿತಿ ನೀಡಿದ ಪ್ರಯಾಣಿಕರ ಮೇಲೆ ವಿಪತ್ತು ನಿರ್ವಹಣಾ ಕಾಯಿದೆ, 2005 ರ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.


ಕೇಂದ್ರ ಸರ್ಕಾರವು ಗೊತ್ತುಪಡಿಸಿದ ದೇಶಗಳ ಹೊರತಾಗಿ ಇತರ ದೇಶಗಳ ಪ್ರಯಾಣಿಕರು ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪರೀಕ್ಷೆಯು ನಕಾರಾತ್ಮಕವಾಗಿದ್ದರೆ ಮನೆಯಲ್ಲಿ ಎರಡು ವಾರಗಳ ಸಂಪರ್ಕತಡೆಗೆ ಒಳಗಾಗಬೇಕಾಗುತ್ತದೆ. ಪಾಸಿಟಿವ್ ಇದ್ದರೆ ಅವರನ್ನು ಆಸ್ಪತ್ರೆಗೆ ರವಾನಿಸಲಾಗುತ್ತದೆ.


ಸದ್ಯಕ್ಕೆ "ಅಪಾಯದಲ್ಲಿದೆ" ಎಂದು ಪರಿಗಣಿಸಲಾದ ದೇಶಗಳ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್‌ಡಮ್, ಯುರೋಪ್‌ನ ಎಲ್ಲಾ 44 ದೇಶಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿವೆ.