ಹೈದರಾಬಾದ್: ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರಿದ 8 ಕೋಟಿ ರೂ. ನಗದನ್ನು ತೆಲಂಗಾಣ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದೆ ಬ್ಯಾಂಕಿನಿಂದ ಈ ಹಣವನ್ನು ತೆಗೆಯಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷವು ಈ ಆರೋಪವನ್ನು ತಳ್ಳಿ ಹಾಕಿದ್ದು, ಇದು ತೆಲಂಗಾಣ ಆಡಳಿತಾರೂಢ ಪಕ್ಷದ ಪಿತೂರಿ ಎಂದು ಹೇಳಿದೆ. 


COMMERCIAL BREAK
SCROLL TO CONTINUE READING

ಪಕ್ಷದ ಮುಖ್ಯ ವಕ್ತಾರರು ಈ ಸಂಬಂಧ ಪ್ರತಿಕ್ರಿಯಿಸಿದ್ದು, "ನಾವು ಈ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ. ನಮ್ಮ ಪಕ್ಷ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲ. ನಾವು ಚುನಾವಣಾ ಆಯೋಗದ ಮಾರ್ಗದರ್ಶನವನ್ನು ಉಲ್ಲಂಘಿಸಿಲ್ಲ" ಎಂದಿದ್ದಾರೆ.


ಇದಕ್ಕೂ  ಮೊದಲು ಮಾರ್ಚ್ 31 ರಂದು  ಆದಾಯ ತೆರಿಗೆ ಇಲಾಖೆ ತಮಿಳುನಾಡಿನ ವೆಲ್ಲೂರ್ನಲ್ಲಿ ಸಿಮೆಂಟ್ ಕಾರ್ಖಾನೆಯಿಂದ 11.53 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಈ ಹಣವನ್ನು ಚುನಾವಣೆಗೆ ಬಳಸುವ ಸಲುವಾಗಿ ಚೀಲಗಳು ಮತ್ತು ಹಲಗೆಗಳ ಕೆಳಗೆ ಬಚ್ಚಿಡಲಾಗಿತ್ತು ಎಂದು ಆರೋಪಗಳು ಕೇಳಿಬಂದಿದ್ದವು. 



ಈವರೆಗೂ ಸುಮಾರು 1,460 ಕೋಟಿ ರೂ. ಮೌಲ್ಯದ ಅನುಮಾನಾಸ್ಪದ ನಗದು, ಅಕ್ರಮ ಮದ್ಯ ಮತ್ತು ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ಎಪ್ರಿಲ್ 1 ರಂದು ಮಾಹಿತಿ ನೀಡಿದೆ.