ದೆಹಲಿಯ ಶಾಹೀನ್ ಬಾಗ್ ನಲ್ಲಿ ಶೂಟ್ ಔಟ್, ಆರೋಪಿ ಪೋಲೀಸರ ವಶಕ್ಕೆ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾಕಾರರ ಮೇಲೆ ಹದಿಹರೆಯದ ಶೂಟರ್ ಗುಂಡು ಹಾರಿಸಿದ ಎರಡು ದಿನಗಳ ನಂತರ, ಪೌರತ್ವ ಕಾನೂನು ಸಿಎಎ ವಿರುದ್ಧದ ಪ್ರತಿಭಟನೆಯ ಕೇಂದ್ರವಾದ ದೆಹಲಿಯ ಶಾಹೀನ್ ಬಾಗ್ ಮೇಲೆ ಕಪಿಲ್ ಗುಜ್ಜರ್ ಎನ್ನುವ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ್ದಾರೆ.
ನವದೆಹಲಿ: ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾಕಾರರ ಮೇಲೆ ಹದಿಹರೆಯದ ಶೂಟರ್ ಗುಂಡು ಹಾರಿಸಿದ ಎರಡು ದಿನಗಳ ನಂತರ, ಪೌರತ್ವ ಕಾನೂನು ಸಿಎಎ ವಿರುದ್ಧದ ಪ್ರತಿಭಟನೆಯ ಕೇಂದ್ರವಾದ ದೆಹಲಿಯ ಶಾಹೀನ್ ಬಾಗ್ ಮೇಲೆ ಕಪಿಲ್ ಗುಜ್ಜರ್ ಎನ್ನುವ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ್ದಾರೆ.
ದಕ್ಷಿಣ ದೆಹಲಿ ಪ್ರದೇಶದ ಶಾಹೀನ್ ಬಾಗ್ ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.ಈಗ ಆತನನ್ನು ಪೊಲೀಸರು ಹಿಡಿದಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿರುವ ವಿಡಿಯೋದಲ್ಲಿ ಗುಂಡು ಹಾರಿಸಿರುವ ವ್ಯಕ್ತಿ ತನ್ನನ್ನು ಕಪಿಲ್ ಗುಜ್ಜರ್ ಎಂದು ಹೇಳಿಕೊಂಡಿದ್ದು' ನಮ್ಮ ದೇಶದಲ್ಲಿ ಹಿಂದುಗಳದಷ್ಟೇ ನಡೆಯೋದು, ಬೇರೆ ಯಾರದ್ದು ಅಲ್ಲ' ಎಂದು ಹೇಳಿದ್ದಾರೆ. ಈ ವ್ಯಕ್ತಿ ಎರಡು ಮೂರು ಬಾರಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.ಬಂಧಿತನಾಗಿರುವ ಈ ವ್ಯಕ್ತಿ ನೋಯಿಡಾ ಬಾರ್ಡರ್ ನಲ್ಲಿರುವ ದಲ್ಲಾಪುರ ಗ್ರಾಮಾದ ನಿವಾಸಿ ಎನ್ನಲಾಗಿದೆ.
ಈ ವ್ಯಕ್ತಿಯು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಪೊಲೀಸರು ತಕ್ಷಣ ಆತನನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.ಈಗ ಈ ಘಟನೆ ಪೌರತ್ವ ಕಾಯ್ದೆ ಪ್ರತಿಭಟನಾಕಾರರ ಮೇಲೆ ರಾಮ್ ಭಕ್ತ ಗೋಪಾಲ್ ಎನ್ನುವ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದ ಎರಡು ದಿನಗಳ ನಂತರ ಬಂದಿದೆ.
ಶಹೀನ್ ಬಾಗ್ ನಲ್ಲಿ ಮಹಿಳೆಯರು ನಡೆಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯೂ ದೇಶಾದ್ಯಂತ ಗಮನ ಸೆಳೆದಿದೆ, ನೂತನ ತಿದ್ದುಪಡಿ ಕಾಯ್ದೆಯುಧರ್ಮವನ್ನು ಪೌರತ್ವಕ್ಕೆ ಮಾನದಂಡವಾಗಿಸುತ್ತದೆ. ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರು ಮಾತ್ರ ಧಾರ್ಮಿಕ ಕಿರುಕುಳದಿಂದ ಪಾರಾಗಿ 2015 ರ ಮೊದಲು ಭಾರತಕ್ಕೆ ಪ್ರವೇಶಿಸಿದರೆ ಭಾರತೀಯ ನಾಗರಿಕರಾಗಬಹುದು ಎಂಬ ಕಾರಣಕ್ಕೆ ಕಾನೂನು ಮುಸ್ಲಿಮರ ವಿರುದ್ಧ ತಾರತಮ್ಯವನ್ನು ತೋರಿಸುತ್ತದೆ ಎಂದು ವಿಮರ್ಶಕರು ಹೇಳುತ್ತಾರೆ.