ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್- ಹನ್ನೊಂದನೇ ತರಗತಿ ವಿದ್ಯಾರ್ಥಿ ಅರೆಸ್ಟ್
ನವದೆಹಲಿ: ರಿಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹತ್ಯೆಯಾದ ಏಳು ವರ್ಷದ ಬಾಲಕ ಪ್ರದ್ಯುಮನ್ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಅದೇ ಶಾಲೆಯ ಹನ್ನೊಂದನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಿದ್ದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ನನ್ನು ಬಂಧಿಸಿದ್ದಾರೆ. ಈಗ ಅನುಮಾನದ ಆಧಾರದ ಮೇಲೆ ಸಿಬಿಐ ಅದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರ ರಾತ್ರಿ 11 ಗಂಟೆಗೆ ಬಂದಿಸಿದ್ದಾರೆ. ಏತನ್ಮಧ್ಯೆ ವಿದ್ಯಾರ್ಥಿಯ ತಂದೆ ಕಳೆದ ರಾತ್ರಿ ಸಿಬಿಐ ನನ್ನ ಮಗನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಈ ಪ್ರಕರಣಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ ಎಂದು ಬಾಲಕನ ತಂದೆ ಶಾಲೆಯ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸಿಬಿಐ ಬುಧವಾರ ಮಧ್ಯಾಹ್ನ 2 ಗಂಟೆಗೆ ಜುವೆನಿಲ್ ಬೋರ್ಡ್ ಮುಂದೆ ಈ ವಿದ್ಯಾರ್ಥಿಯನ್ನು ಹಾಜರುಪಡಿಸಲಿದೆ. ವಿದ್ಯಾರ್ಥಿಯು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿರುವುದರಿಂದ ವಿದ್ಯಾರ್ಥಿಯ ಮೇಲೆ ಮೊಕದ್ದಮೆ ಹೂಡಬೇಕೇ ಅಥವಾ ಇಲ್ಲವೇ ಎಂದು ಬೋರ್ಡ್ ನಿರ್ಧರಿಸಲಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 8ರಂದು, 2ನೇ ತರಗತಿ ವಿದ್ಯಾರ್ಥಿ ಏಳು ವರ್ಷದ ಬಾಲಕ ಪ್ರದ್ಯುಮನ್ ಮೃತ ದೇಹವು ನಿಗೂಢ ಪರಿಸ್ಥಿತಿಯಲ್ಲಿ ಶಾಲೆಯ ಶೌಚಾಲಯದಲ್ಲಿ ದೊರೆತಿತ್ತು. ಆನಂತರದಲ್ಲಿ ಹತ್ಯೆ ಆರೋಪದ ಮೇರೆಗೆ ಶಾಲೆಯ ಬಸ್ ಕಂಡಕ್ಟರ್ ಅನ್ನು ಬಂದಿಸಿದ್ದರು. ಈ ವಿದ್ಯಾರ್ಥಿಯು ತಾವು ಟಾಯ್ಲೆಟ್ ಬಳಿ ಪ್ರದ್ಯುಮನ್ ಅನ್ನು ಮೊದಲ ಬಾರಿಗೆ ಕಂಡಿರುವುದಾಗಿ ಹೇಳಿಕೆ ನೀಡಿದ್ದನು. ಸಿಬಿಐ ಈಗಾಗಲೇ ಈ ವಿದ್ಯಾರ್ಥಿಯನ್ನು ಹಲವು ಬಾರಿ ವಿಚಾರಣೆ ಒಳಪಡಿಸಿತ್ತು.