ಛಿದ್ರ ಛಿದ್ರವಾಗಿದ್ದ ಹುತಾತ್ಮ ಯೋಧರ ಗುರುತು ಪತ್ತೆಯಾಗಿದ್ದು ಹೇಗೆ ಗೊತ್ತಾ?
ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯ ತೀವ್ರತೆ ಎಷ್ಟಿತ್ತೆಂದರೆ 10 ಕಿ.ಮೀ. ದೂರದವರೆಗೂ ಸ್ಫೋಟದ ಸದ್ದು ಕೇಳಿತ್ತು. ಅಷ್ಟೇ ಅಲ್ಲ, ಯೋಧರ ದೇಹ ಗುರುತು ಪತ್ತೆಹಚ್ಚಲಾಗದಷ್ಟು ಛಿದ್ರ ಛಿದ್ರವಾಗಿತ್ತು.
ನವದೆಹಲಿ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ ಹುತಾತ್ಮರಾದ 40ಕ್ಕೂ ಅಧಿಕ ಸೈನಿಕರ ಗುರುತು ಪತ್ತೆಹಚ್ಚುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯ ತೀವ್ರತೆ ಎಷ್ಟಿತ್ತೆಂದರೆ 10 ಕಿ.ಮೀ. ದೂರದವರೆಗೂ ಸ್ಫೋಟದ ಸದ್ದು ಕೇಳಿತ್ತು. ಅಷ್ಟೇ ಅಲ್ಲ, ಯೋಧರ ದೇಹ ಗುರುತು ಪತ್ತೆಹಚ್ಚಲಾಗದಷ್ಟು ಛಿದ್ರ ಛಿದ್ರವಾಗಿತ್ತು. ಇಂಥ ಸಂದರ್ಭದಲ್ಲಿ ಸೇನಾ ಸಿಬ್ಬಂದಿಗೆ ಮೃತ ದೇಹಗಳ ಗುರುತು ಪತ್ತೆಹಚ್ಚಲು ಸಹಾಯವಾಗಿದ್ದು ಯೋಧರ ಆಧಾರ್ ಕಾರ್ಡ್, ರಜೆ ಪತ್ರ ಮತ್ತು ಐಡೆಂಟಿಟಿ ಕಾರ್ಡ್'ಗಳು!
ಹೌದು, ಆರ್ ಡಿಎಕ್ಸ್ ಪ್ರಚೋದಿತ ಸ್ಪೋಟದ ಪರಿಣಾಮದಿಂದಾಗಿ ಛಿದ್ರಗೊಂಡು ಸುಟ್ಟುಕರಕಲಾಗಿದ್ದ ಸೈನಿಕರ ಮೃತದೇಹಗಳ ಗುರುತನ್ನು ಕಂಡುಹಿಡಿಯಲು ಬಹಳ ಕಷ್ಟವಾಗಿತ್ತು. ಅಲ್ಲದೆ, ಯೋಧರು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದ ಬ್ಯಾಗ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಂಥ ಸಂದರ್ಭದಲ್ಲಿ ಯೋಧರ ಪರ್ಸ್ನಲ್ಲಿದ್ದ ಐಡಿ ಕಾರ್ಡ್, ಆಧಾರ್ ಮತ್ತು ಪಾನ್ ಕಾರ್ಡ್ ಗಳು ಸಹಾಯಕ್ಕೆ ಬಂದವು. ಅಲ್ಲದೆ, ಯೋಧರು ರಜೆ ಕೋರಿ ಬರೆದಿದ್ದ ಪತ್ರಗಳ ಸಹಾಯದಿಂದ ಕೆಲವರ ಗುರುತು ಪತ್ತೆಹಚ್ಚಿದರೆ, ತುಂಡಾಗಿದ್ದ ಯೋಧರ ಕೈಗಳಲ್ಲಿ ಕಟ್ಟಿದ್ದ ವಾಚ್ ಮೂಲಕ ಸಹೋದ್ಯೋಗಿಗಳು ಅವರ ಗುರುತು ಪತ್ತೆ ಹಚ್ಚಿಲಾಯಿತು.
ಈ ಮೂಲಕ ಹುತಾತ್ಮರಾದ ಯೋಧರ ಪಾರ್ಥಿವ ಶರೀರವನ್ನು ಅವರ ಕುಟುಂಬಗಳಿಗೆ ರವಾನಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ. ಅಲ್ಲದೆ, ಮೃತ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಉದ್ಯೋಗ ಒದಗಿಸುವ ಭರವಸೆಯನ್ನೂ ಕೇಂದ್ರ ಸರ್ಕಾರ ನೀಡಿದೆ.