ಹೈದ್ರಾಬಾದ್ ಬಳಿಕ ಉನ್ನಾವೋದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ, ಯುವತಿಯ ಸ್ಥಿತಿ ಗಂಭೀರ
ಸಂತ್ರಸ್ಥ ಯುವತಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ತೆರಳುತ್ತಿದ್ದಳು. ಈ ವೇಳೆ ಆಕೆಯನ್ನು ಸುತ್ತುವರೆದ ದುಷ್ಕರ್ಮಿಗಳು ಆಕೆಯನ್ನು ಸಜೀವ ದಹಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಉನ್ನಾವೊ: ಹೈದರಾಬಾದ್‌ನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಈಗಾಗಲೇ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಉನ್ನಾವೊನಲ್ಲಿರುವ ಬಿಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂದೂನಗರ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯೋರ್ವಳನ್ನು ಜೀವಂತವಾಗಿ ಸುಟ್ಟುಹಾಕುವ ಪ್ರಯತ್ನ ನಡೆಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ಅತ್ಯಾಚಾರ ಪೀಡಿತ ಯುವತಿಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಆಕೆಯನ್ನು ಲಖನೌನಲ್ಲಿರುವ ಆಘಾತ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಯುವತಿ ಕೆಲಸದ ನಿಮಿತ್ತ ತನ್ನ ಮನೆಯಿಂದ ಹೊರಗಡೆ ತೆರಳುತ್ತಿದ್ದಳು ಎನ್ನಲಾಗಿದ್ದು, ಈ ವೇಳೆ ಆಕೆಯನ್ನು ಸುತ್ತುವರೆದ ದುಷ್ಕರ್ಮಿಗಳು ಆಕೆಯನ್ನು ಸಜೀವವಾಗಿ ದಹಿಸಲು ಯತ್ನಿಸಿದ್ದಾರೆ. ಮೊದಲು ಯುವತಿಯ ಮೇಲೆ ಸೀಮೆಎಣ್ಣೆ ಸುರಿದ ದುಷ್ಕರ್ಮಿಗಳು ನಂತರ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಸಂತ್ರಸ್ತ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ . ವಿಷಯ ತಿಳಿದ ಯುವತಿಯ ಸಂಬಂಧಿಕರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಯುವತಿಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಸದ್ಯಅವಳನ್ನು ಲಖನೌನಲ್ಲಿರುವ ಟ್ರಾಮಾ ಸೆಂಟರ್ ಗೆ ರೆಫರ್ ಮಾಡಲಾಗಿದೆ.
ಯುವತಿಯನ್ನು ಸಜೀವವಾಗಿ ದಹಿಸಲು ಯತ್ನಿಸಲಾದ ವಿಷಯ ತಿಳಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾರೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಸಂತ್ರಸ್ತೆ ಕಳೆದ ಮಾರ್ಚ್‌ನಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ. ಬಳಿಕ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣದಲ್ಲಿ ಐವರು ಆರೋಪಿಗಳ ಹೆಸರು ಕೇಳಿಬಂದಿದ್ದು, ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಇತರ ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಜಾಮೀನಿನ ಮೇಲೆ ಹೊರಬಂದ ಅತ್ಯಾಚಾರ ಪ್ರಕರಣದ ಆರೋಪಿಗಳು ತಮ್ಮ ಇತರ ಸಹಪಾಟಿಗಳ ಜೊತೆ ಸೇರಿ ಈ ಕುಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.