ಮುಂಬೈ: ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ವಿಚಾರಣೆ ನಡೆಸಲು ಸಿಬಿಐಗೆ ರಾಜ್ಯಪಾಲ ಸಿ.ಹೆಚ್‌.ವಿದ್ಯಾಸಾಗರ್‌ ರಾವ್‌ ನೀಡಿದ್ದ ಅನುಮತಿಯನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.


COMMERCIAL BREAK
SCROLL TO CONTINUE READING

ಚವಾಣ್‌ ವಿಚಾರಣೆಗೆ ಅಗತ್ಯವಾದ ಹೊಸ ಸಾಕ್ಷ್ಯಾಧಾರ ಸಲ್ಲಿಸುವುದಾಗಿ ತಿಳಿಸಿದ್ದ ಸಿಬಿಐ, ಯಾವುದೇ ಸಾಕ್ಷ್ಯಾಧಾರ ಸಲ್ಲಿಸಲು ವಿಫಲವಾಗಿದೆ. ಹಾಗಾಗಿ, ಚವಾಣ್‌ ಅವರ ವಿಚಾರಣೆಗೆ ಅನುಮತಿ ನಿರಾಕರಿಸಿರುವುದಾಗಿ ನ್ಯಾಯಮೂರ್ತಿ ರಂಜಿತ್‌ ಮೋರೆ ಹಾಗೂ ಸಾಧನಾ ಜಾಧವ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠವು ತಿಳಿಸಿದ್ದು, ಈ ಬೆಳವಣಿಗೆಯಿಂದಾಗಿ ಅಶೋಕ್ ಅವರು ಈ ಪ್ರಕರಣದಿಂದ ಆರೋಪ ಮುಕ್ತರಾಗುವ ಸಾಧ್ಯತೆ ಹೆಚ್ಚಿದೆ. 


2016ರ ಫೆಬ್ರುವರಿಯಲ್ಲಿ ಮಹಾರಾಷ್ಟ್ರ ಗವರ್ನರ್‌ ವಿದ್ಯಾಸಾಗರ್‌ ರಾವ್‌ ಅವರು ಚವಾಣ್‌ ವಿಚಾರಣೆಗೆ ಸಿಬಿಐಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಚವಾಣ್‌ ಬಾಂಬೆ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.


ಪ್ರಸ್ತುತ ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿರುವ ಅಶೋಕ್‌ ಚವಾಣ್‌ ಅವರು ಡಿ.2008 ರಿಂದ ನ.2010ರ ವರೆಗೂ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. ಆದರ್ಶ ಸೊಸೈಟಿ ವಿವಾದದಿಂದಾಗಿಯೇ ಚವಾಣ್ ಅವರು 2010ರ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.


ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು. ಆದರೆ, ಇದನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿತ್ತು. ಅಲ್ಲದೆ, ಅಪಾರ್ಟ್‌ಮೆಂಟ್‌ನಲ್ಲಿ ಸಾರ್ವಜನಿಕರಿಗೆ ಶೇ. 40ರಷ್ಟು ಫ್ಲ್ಯಾಟ್‌ ಹಂಚಿಕೆ ಮಾಡಿರುವ ಆರೋಪವಿದೆ.