ನವದೆಹಲಿ: ಕೇರಳದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಹೆಚ್ಚುವರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್ಡಿಆರ್ಎಫ್)ದ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರವಾಹ ಪರಿಸ್ಥಿತಿ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ಟ್ವೀಟ್ ಮಾಡಿರುವ ಸಿಂಗ್, ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ಮಾಹಿತಿ ಪಡೆದಿದ್ದು,ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳನ್ನು ಕೇರಳಕ್ಕೆ ನಿಯೋಜಿಸಲಾಗಿದೆ. ಕೇರಳ ಮುಖ್ಯಮಂತ್ರಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.



ಇನ್ನು, ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಕೆ. ಸಿನ್ಹಾ ನೇತೃತ್ವದಲ್ಲಿ ಕೇರಳ ಪ್ರವಾಹ ಪರಿಸ್ಥಿತಿಯ ಸಂಬಂಧ ಗೃಹ ಸಚಿವಾಲಯದಲ್ಲಿ ಬಿಕ್ಕಟ್ಟು ನಿರ್ವಹಣೆ ಸಮಿತಿಯ ಸಭೆ ನಡೆಯುತ್ತಿದೆ. ಕೇರಳದ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಭೀಕರ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಈ ಮೊದಲು, ಎನ್ಡಿಆರ್ಎಫ್ ತಂಡಗಳು ಪಥಮಿತಿಟ್ಟಾ, ಕೋಝಿಕೋಡ್, ಎರ್ನಾಕುಲಂ, ತ್ರಿಶೂರ್ ಮತ್ತು ಅಲಪುಳ ಜಿಲ್ಲೆಯಲ್ಲಿ 926 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿವೆ. ಸೇನೆಯು 35 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿ ಮಲಂಪುಳಾದ ವಲ್ಯಕಾಡು ಹಳ್ಳಿಯಿಂದ ಹಿರಿಯ ನಾಗರಿಕರು ಸೇರಿದಂತೆ ಸುಮಾರು 100 ಜನರನ್ನು ರಕ್ಷಿಸಿದೆ. 



ಏತನ್ಮಧ್ಯೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಎಲ್ಲಾ ರಸ್ತೆಗಳು ಬಂದ್ ಆಗಿರುವುದರಿಂದ ಮುನ್ನಾರ್'ನಲ್ಲಿ ಬಸ್ಸಿನೊಳಗೆ 82 ಪ್ರವಾಸಿಗರು ಸಿಲುಕಿದ್ದಾರೆ. 



ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದು, ಹಲವೆಡೆ ಭೂಕುಸಿತವಾಗಿದೆ. ಇಲ್ಲಿಯವರೆಗೆ, ಕನಿಷ್ಠ 73 ಮಂದಿ ಮೃತಪಟ್ಟಿದ್ದಾರೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಂತ್ರಸ್ಥರ ರಕ್ಷಣಾ ಕಾರ್ಯ ಮುಂದುವರೆದಿದೆ.