ಬಿಹಾರದ ಬಳಿಕ ಈ ರಾಜ್ಯದಲ್ಲಿ ಪಾನ್ ಮಸಾಲಾ ನಿಷೇಧ
ಪ್ರಸ್ತುತ, ಈ ನಿಯಮವನ್ನು ನವೆಂಬರ್ 7 ರಿಂದ ಒಂದು ವರ್ಷ ಜಾರಿಗೆ ತರಲಾಗಿದೆ. ಇದರ ಪರಿಣಾಮವನ್ನು ಪರಿಶೀಲಿಸಿದ ಬಳಿಕ ನಿಷೇಧವನ್ನು ಮುಂದುವರಿಸುವ ಬಗ್ಗೆ ಪರಿಗಣಿಸಲಾಗುತ್ತದೆ ಎನ್ನಲಾಗಿದೆ.
ಕೋಲ್ಕತಾ: ಬಿಹಾರದ ನಂತರ ಪಶ್ಚಿಮ ಬಂಗಾಳದಲ್ಲಿ ಗುಟ್ಖಾ ಮತ್ತು ಪಾನ್ ಮಸಾಲಾವನ್ನು ನಿಷೇಧಿಸಲಾಗಿದೆ. ರಾಜ್ಯದ ಮಮತಾ ಬ್ಯಾನರ್ಜಿ ಸರ್ಕಾರ ಪಾನ್ ಮಸಾಲಾ ನಿಷೇಧಿಸುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ನಿಕೋಟಿನ್ ಕಂಡುಬರುವ ವಸ್ತುಗಳನ್ನು ತಯಾರಿಸುವುದು, ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಕಾನೂನುಬದ್ಧವಾಗಿ ಶಿಕ್ಷಾರ್ಹವಾಗಿರುತ್ತದೆ. ಆದಾಗ್ಯೂ, ಅಧಿಸೂಚನೆಯಲ್ಲಿ ಸಿಗರೇಟ್ ಅನ್ನು ಉಲ್ಲೇಖಿಸಲಾಗಿಲ್ಲ.
ಪ್ರಸ್ತುತ, ಈ ನಿಯಮವನ್ನು ನವೆಂಬರ್ 7 ರಿಂದ ಒಂದು ವರ್ಷ ಜಾರಿಗೆ ತರಲಾಗಿದೆ. ಇದರ ಪರಿಣಾಮವನ್ನು ಪರಿಶೀಲಿಸಿದ ಬಳಿಕ ನಿಷೇಧವನ್ನು ಮುಂದುವರಿಸುವ ಬಗ್ಗೆ ಪರಿಗಣಿಸಲಾಗುತ್ತದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2011 ರ ಅಡಿಯಲ್ಲಿ ಇಲಾಖೆ ಗುಟ್ಖಾ ಮತ್ತು ಪಾನ್ ಮಸಾಲವನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಇದಕ್ಕೂ ಮೊದಲು ಗುಟ್ಖಾ ಜೊತೆಗೆ ಪಾನ್ ಮಸಾಲವನ್ನು ಬಿಹಾರದಲ್ಲಿ ನಿಷೇಧಿಸಲಾಯಿತು. ಗುಟ್ಖಾವನ್ನು ಬಿಹಾರದ ಹೊರತಾಗಿ ಇತರ ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಗುಟ್ಖಾ ಜೊತೆಗೆ ಪಾನ್ ಮಸಾಲಾವನ್ನು ನಿಷೇಧಿಸಲಾಗಿದೆ.