ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಬಿಜೆಪಿ-ಶಿವಸೇನೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಏತನ್ಮಧ್ಯೆ, ಸಂಸದ ಸಂಜಯ್ ರೌತ್ ಅವರ ನೇತೃತ್ವದಲ್ಲಿ ಶಿವಸೇನೆ ಮುಖಂಡರು ಇಂದು ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಯನ್ನು ಭೇಟಿಯಾದರು. ರಾಜ್ಯಪಾಲರೊಂದಿಗಿನ ಭೇಟಿಯ ಬಳಿಕ ಮಾತನಾಡಿದ ಸಂಜಯ್ ರೌತ್, 'ಶಿವಸೇನೆ ಸರ್ಕಾರ ರಚನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಯಾರಿಗೆ ಸಂಖ್ಯಾಬಲವಿದೆಯೋ ಅವರು ಸರ್ಕಾರ ರಚಿಸುತ್ತಾರೆ' ಎಂದಿದ್ದಾರೆ.



COMMERCIAL BREAK
SCROLL TO CONTINUE READING

"ಇಂದು ನಾನು ಮತ್ತು ನನ್ನ ಸಹೋದ್ಯೋಗಿ ನಾಯಕ ಇಬ್ಬರೂ ರಾಜ್ಯಪಾಲರನ್ನು ಭೇಟಿಯಾಗಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದೆವು. ನಾವು ನಮ್ಮ ಪಕ್ಷದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯಪಾಲರೂ ಶಾಂತಚಿತ್ತರಾಗಿ ನಮ್ಮ ಮಾತುಗಳನ್ನು ಕೇಳಿದ್ದಾರೆ. ರಾಜ್ಯದಲ್ಲಿ ಶೀಘ್ರದಲ್ಲೇ ಸರ್ಕಾರ ರಚನೆಯಾಗಬೇಕು ಎಂಬ ಬೇಡಿಕೆಯನ್ನು ರಾಜ್ಯಪಾಲರ ಮುಂದೆ ಇಡಲಾಗಿದೆ. ಯಾವುದೇ ಸರ್ಕಾರ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಬಹುಮತ ಹೊಂದಿರುವವರು ಸರ್ಕಾರ ರಚಿಸುತ್ತಾರೆ ಎಂದು ತಿಳಿಸಿದರು.


ಇನ್ನೊಂದೆಡೆ ಮಹಾರಾಷ್ಟ್ರದ ಸಿಎಂ ಹುದ್ದೆಯಲ್ಲಿ ರಾಜಿ ಮಾಡಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ ಎಂದು ಮೂಲಗಳು ತಿಳಿಸಿವೆ. ಶಿವಸೇನೆಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಬಿಜೆಪಿ ಸಿದ್ಧವಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಬಿಜೆಪಿ ಕಾದು ನೋಡುವ ತಂತ್ರದ ಮೇಲೆ ಕೆಲಸ ಮಾಡುತ್ತದೆ ಎನ್ನಲಾಗಿದೆ. ನವೆಂಬರ್ 8 ರ ಮೊದಲು ಎಲ್ಲವೂ ತಹಬದಿಗೆ ಬರಲಿದೆ ಎಂದು ಬಿಜೆಪಿ ಆಶಿಸಿದೆ. ಶಿವಸೇನೆ ಜೊತೆಗೆ ಮಾತುಕತೆ ನಡೆಸಲು ಪಕ್ಷವು ಸಿದ್ಧವಿದೆ. ಬಿಜೆಪಿಯಲ್ಲಿ ಸ್ವತಂತ್ರರು ಮತ್ತು ಸಣ್ಣ ಪಕ್ಷದ ಶಾಸಕರು ಸೇರಿದಂತೆ 121 ಶಾಸಕರು ಇದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಸರ್ಕಾರ ರಚಿಸುವುದಿಲ್ಲ. ಅಂತೆಯೇ 50:50 ಸೂತ್ರವನ್ನು ಬಿಜೆಪಿ ಒಪ್ಪಲು ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. 


ಈ ಎಲ್ಲಾ ಬೆಳವಣಿಗೆಗಳ ನಡುವೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ.


ಮಹಾರಾಷ್ಟ್ರದಲ್ಲಿ ಸಿಎಂ ಪಟ್ಟ ಯಾರ ಪಾಲಾಗಲಿದೆ? ಬಿಜೆಪಿ-ಶಿವಸೇನೆ ಮೈತ್ರಿ ಅಧಿಕಾರ ಹಿಡಿಯುವುದೇ ಅಥವಾ ಶಿವಸೇನೆ, ಎನ್ ಸಿಪಿ ಜೊತೆ ಕೈ ಜೋಡಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.